ಕನ್ನಡ ಕಿರುತೆರೆ ನಟಿ ರಕ್ಷಾ ಹೊಳ್ಳ, ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. 'ನಾಮ್ ಇರುವರ್ ನಮಕ್ಕು ಇರುವರ್' ಧಾರಾವಾಹಿಯಲ್ಲಿ ರಕ್ಷಾ ನಟಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಈ ಧಾರಾವಾಹಿಯಿಂದ ಅವರು ಹೊರಬಂದಿದ್ದಾರೆ.

'ನಾಮ್ ಇರುವರ್ ನಮಕ್ಕು ಇರುವರ್' ಧಾರಾವಾಹಿಯಲ್ಲಿ ರಕ್ಷಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಇದೀಗ ಅವರ ಜಾಗಕ್ಕೆ ರಚಿತ ಮಹಾಲಕ್ಷ್ಮಿ ಬಂದಿದ್ದಾರೆ. ವಿಶೇಷ ಎಂದರೆ ಇಬ್ಬರೂ ಕನ್ನಡತಿಯರೇ. ತಮಿಳಿನ ವಿಜಯ್ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಸೂರ್ಯಕಾಂತಿ ಧಾರಾವಾಹಿಯ ಕಾಂತಿಯಾಗಿ ಕನ್ನಡ ಕಿರುತೆರೆಯಲ್ಲಿ ಹೆಸರು ಗಳಿಸಿದ ರಚಿತ ಮಹಾಲಕ್ಷ್ಮಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 'ಮೇಘ ಮಂದಾರ' ಧಾರಾವಾಹಿ ಮೂಲಕ.

ಸವಿಗನಸು, ಬಂದೇ ಬರತಾವ ಕಾಲ, ಸುಪ್ರಭಾತ, ಮನೆಯೊಂದು ಮೂರು ಬಾಗಿಲು, ಸಾಗುತ ದೂರ ದೂರ, ಗೀತಾಂಜಲಿ ಧಾರಾವಾಹಿಯಲ್ಲಿ ಕೂಡಾ ಅಭಿನಯಿಸಿರುವ ರಚಿತ ಮಹಾಲಕ್ಷ್ಮಿ, ಸ್ವಾತಿ ಚಿನುಕುಲು, ಮಾ ನಾನ್ನ, ಪಿರಿವೊಮ್ ಸಂತಿಪ್ಪೊಮ್, ಮಸಾಲ ಕುಟುಂಬಮ್, ಇಲ್ಲವರಸಿ, ಉಪ್ಪು ಕರುವಾಡು, ನಚಿಯಾಪುರಂ ಸೇರಿ ತಮಿಳು, ತೆಲುಗು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ತಮಿಳು ಧಾರಾವಾಹಿಗಳಲ್ಲಿ ನಟಿಸುವುದು ಮಾತ್ರವಲ್ಲ ತಮಿಳು ನಟನನ್ನು ಪ್ರೀತಿಸಿ ಮದುವೆಯಾಗಿ ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ. ಇದೀಗ ರಚಿತ ಮಹಾಲಕ್ಷ್ಮಿ ಮತ್ತೊಂದು ಧಾರಾವಾಹಿ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಲು ಮುಂದಾಗಿದ್ದಾರೆ.