ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ರುಕ್ಕು' ಧಾರಾವಾಹಿಯಲ್ಲಿ ನಾಯಕಿ ರುಕ್ಕು ಆಗಿ ಅಭಿನಯಿಸುತ್ತಿದ್ದ ಶೋಭಾ ಶೆಟ್ಟಿ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದಾರೆ. ಧಾರಾವಾಹಿಯಲ್ಲಿ ಪಾತ್ರಗಳು ಬದಲಾಗುವುದು ಹೊಸದೇನಲ್ಲ. ಆದರೆ ಧಾರಾವಾಹಿ ಆರಂಭವಾಗಿ ಕೇವಲ ಎರಡು ತಿಂಗಳಲ್ಲಿ ನಾಯಕಿ ಪಾತ್ರ ಬದಲಾಗಿರುವುದು ವಿಶೇಷ.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತನು ಆಗಿ ಅಭಿನಯಿಸುತ್ತಿದ್ದ ಶೋಭಾ ಶೆಟ್ಟಿ ನಂತರ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಮೂರು ವರ್ಷಗಳ ನಂತರ ಮತ್ತೆ ರುಕ್ಕು ಆಗಿ ಕನ್ನಡ ಕಿರುತೆರೆಗೆ ಮರಳಿದ ಶೋಭಾ ಶೆಟ್ಟಿ ಕಂ ಬ್ಯಾಕ್ ಆಗಿದ್ದು ವೀಕ್ಷಕರಿಗೆ ಸಂತಸ ನೀಡಿತ್ತು. ಇದೀಗ ಅವರು ಪಾತ್ರಕ್ಕೆ ವಿದಾಯ ಹೇಳಿದ್ದು ಅವರ ಜಾಗಕ್ಕೆ ಮತ್ತೋರ್ವ ನಟಿಯ ಆಗಮನವಾಗಿದೆ. ಶೋಭಾ ಶೆಟ್ಟಿ ಬದಲಿಗೆ ರುಕ್ಕು ಆಗಿ ರಚನಾ ಗೌಡ ಅಭಿನಯಿಸುತ್ತಿದ್ದಾರೆ. ರಚನಾ ಗೌಡ ಅವರ ಅಭಿನಯದ ಸಂಚಿಕೆಗಳು ಈಗಾಗಲೇ ಪ್ರಸಾರ ಆರಂಭಿಸಿದೆ. ಅಂದ ಹಾಗೆ ರಚನಾ ಗೌಡ ಕಿರುತೆರೆಗೆ ಹೊಸಬರೇನಲ್ಲ. ಈಗಾಗಲೇ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ರಚನಾ ಗೌಡ ಇದೀಗ ರುಕ್ಕು ಆಗಿ ಮೋಡಿ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಮ್ಯಾನ್ ಆಫ್ ದಿ ಮ್ಯಾಚ್' ಆಡಲು ಹೊರಟ ರಾಮಾ ರಾಮಾ ರೇ ನಿರ್ದೇಶಕ...!
ತಂದೆ ಇಲ್ಲದ ಕುಟುಂಬಕ್ಕೆ ನಾಯಕಿ ರುಕ್ಕುವೇ ಆಧಾರ. ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ರುಕ್ಕು ತನ್ನ ಅಕ್ಕನ ಮದುವೆ ಮಾಡಿಸುತ್ತಾಳೆ. ಇನ್ನು ತಂಗಿಯ ವಿದ್ಯಾಭ್ಯಾಸಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿರುವ ರುಕ್ಕು ಮುಗ್ಧ ಮನಸ್ಸಿನ ಹುಡುಗಿ. ಓದು ಬರಹವಿಲ್ಲದ ರುಕ್ಕು ಆಲೋಚನೆಯಲ್ಲಿ ಶ್ರೀಮಂತಿಕೆ, ಜೀವನದಲ್ಲಿ ಸರಳತೆ ಇರಬೇಕು ಎಂದು ನಂಬಿರುವ ಗಟ್ಟಿಗಿತ್ತಿ. ಇಂತಿಪ್ಪ ರುಕ್ಕುವಿಗೆ ಇದೀಗ ಮುರಳಿಯೊಂದಿಗೆ ಮದುವೆಯಾಗಿದೆ. ಮುರಳಿ ಹಾಗೂ ರುಕ್ಕುವಿನ ತಂಗಿ ರಾಧಿಕಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಅಮ್ಮನ ಮಾತಿಗೆ ಕಟ್ಟುಬಿದ್ದು ರುಕ್ಕುವನ್ನು ಮದುವೆಯಾದ ಮುರಳಿಗೆ ರಾಧಿಕಾ ಪ್ರೀತಿಯಿಂದ ಹೊರಬರಲಾಗುತ್ತಿಲ್ಲ. ಇತ್ತ ಅಕ್ಕನ ಸುಖಕ್ಕಾಗಿ ತನ್ನ ಪ್ರೀತಿಯನ್ನೇ ಧಾರೆ ಎರೆದಿದ್ದಾಳೆ ರಾಧಿಕಾ. ಮುರಳಿಯನ್ನೇ ತನ್ನ ಜೀವನದ ಸರ್ವಸ್ವ ಎಂದು ನಂಬಿರುವ ರುಕ್ಕುವಿಗೆ ತನ್ನ ಪತಿ ತಂಗಿಯನ್ನು ಪ್ರೀತಿ ಮಾಡುತ್ತಿದ್ದ ವಿಚಾರ ತಿಳಿಯುವುದಾ..? ರುಕ್ಕುವಿನ ನಿಷ್ಕಲ್ಮಶ ಪ್ರೀತಿಗೆ ಮುರಳಿ ಮನ ಸೋಲುತ್ತಾನಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.