ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯ ಮುದ್ದು ಕೋಳಿ ಮರಿ ಮೀರಾ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ನಮ್ಮನೆ ಯುವರಾಣಿಯ ಮೀರಾ ಆಗಿ ಕಿರುತೆರೆ ಲೋಕಾದ್ಯಂತ ಮನೆ ಮಾತಾಗಿರುವ ಈ ಚೆಲುವೆ ಹೆಸರು ಅಂಕಿತಾ ಅಮರ್.
![Nammane yuvarani fame Ankita](https://etvbharatimages.akamaized.net/etvbharat/prod-images/kn-bng-03-nammane-yuvarani-meera-photo-ka10018_13072020192425_1307f_1594648465_6.jpg)
ಫಣಿ ರಾಮಚಂದ್ರ ನಿರ್ದೇಶನದ 'ಜಗಳಗಂಟಿ' ಧಾರಾವಾಹಿಯಲ್ಲಿ ಬಾಲ ಕಲಾವಿದೆಯಾಗಿ ನಟಿಸಿರುವ ಅಂಕಿತಾ, ನಂತರ ರವಿಚಂದ್ರನ್ ಅವರ 'ತುಂಟ' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಮುಂದೆ ನಟನೆಯಿಂದ ದೂರವಾಗಿ ಓದಿನತ್ತ ಗಮನ ಹರಿಸಿದ ಈಕೆ ಮೆಡಿಕಲ್ ಬಯೋ ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಓದಿನಲ್ಲೂ ಚುರುಕಾಗಿದ್ದ ಅಂಕಿತಾ ಎರಡು ಚಿನ್ನದ ಪದಕ ಗಳಿಸಿದ್ದಾರೆ.
![Nammane yuvarani fame Ankita](https://etvbharatimages.akamaized.net/etvbharat/prod-images/kn-bng-03-nammane-yuvarani-meera-photo-ka10018_13072020192425_1307f_1594648465_375.jpg)
ಪಿಹೆಚ್ಡಿ ಮಾಡುವ ಹಂಬಲವಿರುವ ಅಂಕಿತಾ ಇದೀಗ ಸೀರಿಯಲ್ಪ್ರಿಯರ ಕಣ್ಮಣಿ. ನಟನೆ ಎಂಬುದು ಅಂಕಿತಾರಿಗೆ ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಅಂಕಿತಾ ತಂದೆ ತಾಯಿ ಇಬ್ಬರೂ ರಂಗಭೂಮಿ ಕಲಾವಿದರು. ಜೊತೆಗೆ ವರನಟ ಡಾ. ರಾಜಕುಮಾರ್ ಅವರ ಕಟ್ಟಾ ಅಭಿಮಾನಿಗಳು ಕೂಡಾ ಹೌದು. ಅಂಕಿತಾ ಬಣ್ಣದ ಲೋಕಕ್ಕೆ ಬರಲು ತಂದೆ ತಾಯಿ ಬಹಳ ಪ್ರೋತ್ಸಾಹ ನೀಡಿದರು.
![Nammane yuvarani fame Ankita](https://etvbharatimages.akamaized.net/etvbharat/prod-images/kn-bng-03-nammane-yuvarani-meera-photo-ka10018_13072020192425_1307f_1594648465_317.jpg)
ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅಂಕಿತಾಗೆ ನಾಟಕಗಳಿಗೆ ಬಣ್ಣ ಹಚ್ಚುವುದೆಂದರೆ ಬಹಳ ಇಷ್ಟ. ಇದರ ಜೊತೆಗೆ ಆಕೆ ಸಂಗೀತಗಾರ್ತಿ ಕೂಡಾ ಹೌದು. ಈಗಾಗಲೇ ಒಂದಷ್ಟು ವೇದಿಕೆಗಳಲ್ಲಿ ತಮ್ಮ ಗಾನಸುಧೆ ಹರಿಸಿರುವ ಈಕೆ, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ದೊಡ್ಡಪ್ಪನ ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದರು.
![Nammane yuvarani fame Ankita](https://etvbharatimages.akamaized.net/etvbharat/prod-images/kn-bng-03-nammane-yuvarani-meera-photo-ka10018_13072020192425_1307f_1594648465_763.jpg)
ಇದಾದ ನಂತರ 'ಕುಲವಧು' ಧಾರಾವಾಹಿಯಲ್ಲೂ ಬಣ್ಣ ಹಚ್ಚಿರುವ ಈಕೆ ಇದೀಗ ನಮ್ಮನೆ ಯುವರಾಣಿಯ ಮೀರಾ ಆಗಿ ಮನೋಜ್ಞವಾಗಿ ಅಭಿನಯಿಸುತ್ತಿದ್ದಾರೆ. ನಟನೆಯ ರೀತಿ ನೀತಿಗಳ ಬಗ್ಗೆ ಮಗಳಿಗೆ ಸಲಹೆ ನೀಡುವ ಅಂಕಿತಾ ತಂದೆ ಮಗಳ ತಪ್ಪು ಒಪ್ಪುಗಳನ್ನು ತಿದ್ದುತ್ತಾರೆ. ನನ್ನ ನಟನೆಯ ಮೊದಲ ವೀಕ್ಷಕ ಅಪ್ಪ ಎಂದು ಹೇಳುವ ಅಂಕಿತಾ ಡ್ರೆಸ್ ಆಯ್ಕೆ ಬಗ್ಗೆ ಅಮ್ಮ ಸಹಕರಿಸುತ್ತಾರೆ. ಒಟ್ಟಿನಲ್ಲಿ ಇಂದು ಆಕೆ ನಟನಾ ಲೋಕದಲ್ಲಿ ಮಿಂಚುತ್ತಿದ್ದಾಳೆ ಎಂದರೆ ಅದಕ್ಕೆ ಮನೆಯವರ ಪ್ರೋತ್ಸಾಹವೇ ಕಾರಣ.