ಕೆ ಎಸ್ ರಾಮ್ ಜೀ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ಇತ್ತೀಚೆಗಷ್ಟೇ ಯಶಸ್ವಿ ಮುನ್ನೂರು ಸಂಚಿಕೆ ಪೂರೈಸಿತ್ತು. ಪ್ರಸ್ತುತ ಧಾರಾವಾಹಿಯ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
"ನಾಗಿಣಿ ಧಾರಾವಾಹಿಯು ಯಶಸ್ವಿ ಮುನ್ನೂರು ಸಂಚಿಕೆಗಳನ್ನು ಪೂರೈಸಿದೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ನೀವು ನೀಡುವ ಪ್ರೋತ್ಸಾಹವೇ ಮೂಲ ಕಾರಣ. ಜನರಿಗೆ ತೆರೆಯ ಮೇಲೆ ನಟಿಸುವ ನಟ, ನಟಿಯರು, ಉಳಿದ ಕಲಾವಿದರುಗಳು ಅಷ್ಟೇ ಕಣ್ಣ ಮುಂದೆ ಕಾಣುತ್ತಾರೆ. ಆದರೆ, ತೆರೆಯ ಹಿಂದೆ ಅದೆಷ್ಟೋ ಜನ ಧಾರಾವಾಹಿಗಾಗಿ ಶ್ರಮಿಸುತ್ತಿರುತ್ತಾರೆ. ಅವರೆಲ್ಲರ ಪರಿಶ್ರಮದಿಂದಲೇ ನಾವು ನಿಮಗೆ ಮನರಂಜನೆ ನೀಡಲು ಸಾಧ್ಯವಾಗುತ್ತದೆ. ಅವರಿಂದನೇ ನಾವಿಂದು ಯಶಸ್ವಿ ಮುನ್ನೂರು ಸಂಚಿಕೆ ಪೂರೈಸಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.
ಇದರ ಹೊರತಾಗಿ "ದಿನದಿಂದ ದಿನಕ್ಕೆ ಕೊರೊನಾದ ಹಾವಳಿ ಜಾಸ್ತಿ ಯಾಗುತ್ತಿದೆ. ಅನವಶ್ಯಕವಾಗಿ ಯಾರು ಕೂಡಾ ಮನೆಯಿಂದ ಹೊರಗೆ ಹೋಗಬೇಡಿ. ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ನಾನು ಈಗಾಗಲೇ ತೆಗೆದುಕೊಂಡಿದ್ದೇನೆ. ನೀವು ಕೂಡಾ ತೆಗೆದುಕೊಳ್ಳಿ" ಎಂದು ನಿನಾದ್ ಮನವಿ ಕೂಡಾ ಮಾಡಿಕೊಂಡಿದ್ದಾರೆ.