ಕಳೆದ 10 ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈಕೆಯ ಹೆಸರು ಜ್ಯೋತಿ ರೈ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೂರು ಗಂಟು' ಧಾರಾವಾಹಿಯಲ್ಲಿ ನಾಯಕ ವಿಕ್ರಮಾದಿತ್ಯನ ಅಕ್ಕನಾಗಿ ಈ ನಟಿ ಅಭಿನಯಿಸುತ್ತಿದ್ಧಾರೆ.

ಅಕ್ಕನ ಪಾತ್ರದಲ್ಲಿ ಅಭಿನಯಿಸುತ್ತಿರುವ ಜ್ಯೋತಿ ರೈ, ಇದೀಗ ಅಮ್ಮನ ಪಾತ್ರದಲ್ಲಿ ಕೂಡಾ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಅಮ್ಮನಾಗಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಹುಟ್ಟಿದಾಗಿನಿಂದ ತನ್ನ ಅಮ್ಮನನ್ನು ನೋಡಿರುವುದೇ ಇಲ್ಲ. ತನ್ನ ಅಮ್ಮನ ಮುಖ ಪರಿಚಯ ಕೂಡಾ ಇಲ್ಲದಿರುವ ಮೃದುಲಾ, ಅಪ್ಪನ ಪ್ರೀತಿಯ ಆಸರೆಯಲ್ಲಿ ಬೆಳೆದ ಹುಡುಗಿ. ಇದೀಗ ಅಪ್ಪನನ್ನು ಕಳೆದುಕೊಂಡಿರುವ ಮೃದುಲಾ ತನ್ನ ಅಮ್ಮ ಯಾರು...? ಎಷ್ಟೇ ಕಷ್ಟವಾದರೂ ಸರಿ ಅಮ್ಮನ ಬಗ್ಗೆ ತಿಳಿಯಬೇಕು, ಅವಳನ್ನು ಪಡೆಯಲೇಬೇಕು ಎಂಬ ನಿರ್ಧಾರ ಮಾಡುತ್ತಾಳೆ. ಇದಕ್ಕೆ ನಾಯಕ, ಮೃದುಲಾ ಪತಿ ರಾಘವ್ ಕೂಡಾ ಒಪ್ಪಿಗೆ ನೀಡಿ ಬೆಂಬಲ ನೀಡುತ್ತಾನೆ.

ವಿಶೇಷ ಎಂದರೆ ಸ್ಯಾಂಡಲ್ವುಡ್ ಕೃಷ್ಣ ಅಜಯ್ ರಾವ್ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಾಯಕ ರಾಘವ್ ಹಾಗೂ ನಾಯಕಿ ಮೃದುಲಾ ನಡುವೆ ಇದ್ದ ಮನಸ್ತಾಪ ದೂರ ಮಾಡಿ ಅಮ್ಮ ಮಗಳನ್ನು ಒಂದುಗೂಡಿಸಲು ತನ್ನಿಂದ ಆಗುವ ಸಹಾಯ ಮಾಡುತ್ತಾರೆ. ಒಂದರ್ಥದಲ್ಲಿ ಅಮ್ಮ ಮಗಳು ಜೊತೆಯಾಗಲು ಅಜಯ್ ರಾವ್ ಪ್ರಮುಖ ಕಾರಣ. ಬೆಳ್ಳಿತೆರೆ ನಟ, ನಿರ್ದೇಶಕ ಜೈ ಜಗದೀಶ್ ಕೂಡಾ ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಈ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಜೈ ಜಗದೀಶ್, ಕಸ್ತೂರಿ ನಿವಾಸದಲ್ಲಿ ನಾಯಕಿ ಮೃದುಲಾ ತಂದೆಯಾಗಿ ಕಾಣಿಸಿಕೊಂಡಿದ್ದರು.
