ಕಿರುತೆರೆಪ್ರಿಯರ ಮನಗೆದ್ದಿರುವ 'ಜೊತೆ ಜೊತೆಯಲಿ' ಧಾರಾವಾಹಿ ಜುಲೈ 29 ಕ್ಕೆ 200ನೇ ಎಪಿಸೋಡ್ಗಳನ್ನು ಪೂರೈಸಲಿದೆ. ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಧಾರಾವಾಹಿ 200 ಎಪಿಸೋಡ್ಗಳನ್ನು ಪೂರೈಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ನಟ ಅನಿರುದ್ಧ್ ಜತ್ಕರ್ ಹಾಗೂ ಮೇಘಾ ಶೆಟ್ಟಿ ಜೋಡಿ ಮನೆ ಮನೆ ಮಾತಾಗಿದೆ. ಈ ಇಬ್ಬರದ್ದು ಅಪರೂಪದ ಜೋಡಿ. ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರವಿದ್ದರೂ ಅವರಿಬ್ಬರ ನಡುವೆ ಚಿಗುರುವ ಪ್ರೇಮಕಥೆ ಎಲ್ಲರಿಗೂ ಇಷ್ಟವಾಗಿದೆ. ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟಿ ವಿಜಯಲಕ್ಷ್ಮಿ ಸಿಂಗ್ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಶಾರದಾ ದೇವಿಯಾಗಿ ನಟಿಸಿದ್ದಾರೆ.

ಕಿರುತೆರೆ ಪ್ರವೇಶ ಕುರಿತು ಮಾತನಾಡಿರುವ ನಟಿ ವಿಜಯಲಕ್ಷ್ಮಿ ಸಿಂಗ್, 'ಆರೂರು ಜಗದೀಶ್ ನನ್ನನ್ನು ಈ ಧಾರಾವಾಹಿಯಲ್ಲಿ ನಟಿಸಲು ಕೇಳಿದಾಗ ಮೊದಲು ನಾನು ಒಪ್ಪಿರಲಿಲ್ಲ. ಆದರೆ ಧಾರಾವಾಹಿಯ ಕೆಲವೊಂದು ಎಪಿಸೋಡ್ಗಳನ್ನು ನೋಡಿದಾಗ, ಆ ಧಾರಾವಾಹಿಯಲ್ಲಿ ನಟಿಸಲು ನಾನು ಒಪ್ಪಿಕೊಂಡೆ. ಈ ಧಾರಾವಾಹಿ ಸಿನಿಮಾದ ಗುಣಮಟ್ಟದಲ್ಲಿದೆ. ಶ್ರೀಮಂತ ಕುಟುಂಬದ ಹಿನ್ನೆಲೆಯ ನನ್ನ ಶಾರದಾದೇವಿ ಪಾತ್ರಕ್ಕೆ ಅಪಾರ ಗೌರವವಿದೆ. ಆರ್ಯವರ್ಧನ್ ತಾಯಿಯಾಗಿ ನನ್ನ ಪಾತ್ರ ಚೆನ್ನಾಗಿರುವುದರಿಂದ ಈ ಪಾತ್ರ ಒಪ್ಪಿಕೊಂಡೆ' ಎನ್ನುತ್ತಾರೆ ವಿಜಯಲಕ್ಷ್ಮಿ ಸಿಂಗ್.

ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿ, 'ಕನ್ನಡ ಕಿರುತೆರೆ ವಾಹಿನಿಗಳಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿ ಹೊಸ ದಾಖಲೆ ಬರೆದಿದೆ. ಇದೀಗ 200 ಕಂತುಗಳನ್ನು ತಲುಪಿರುವುದು ಅದರ ಯಶಸ್ಸಿಗೆ ಸಾಕ್ಷಿಯಾಗಿದೆ. ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಅದಕ್ಕೆ ವೀಕ್ಷಕರೂ ಸದಾ ಸ್ಪಂದಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಯಶಸ್ಸು ನಮಗೆ ಮತ್ತಷ್ಟು ಅಂತದ್ದೇ ಕಾರ್ಯಕ್ರಮಗಳನ್ನು ರೂಪಿಸಲು ಸ್ಫೂರ್ತಿ ತಂದಿದೆ' ಎಂದಿದ್ದಾರೆ.