ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾವಲ್ಲಭ' ಧಾರಾವಾಹಿ ಈ ವಾರಾಂತ್ಯದಲ್ಲಿ ಮುಗಿಯಲಿದೆ. ಈ ಬೇಸರದ ನಡುವೆಯೂ ಸೀತಾವಲ್ಲಭ ಧಾರಾವಾಹಿ ತಂಡದಿಂದ ಇದೀಗ ವೀಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಜಗನ್ ಚಂದ್ರಶೇಖರ್ ಹಾಗೂ ಸುಪ್ರಿತಾ ಸತ್ಯನಾರಾಯಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಸೀತಾವಲ್ಲಭ' ಧಾರಾವಾಹಿಯ ಭಾಗ 2 ಪ್ರಸಾರವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಧಾರಾವಾಹಿಯಲ್ಲಿ ನಾಯಕ ಆರ್ಯವಲ್ಲಭ ಆಗಿ ನಟಿಸುತ್ತಿರುವ ಜಗನ್ ಚಂದ್ರಶೇಖರ್ ಈ ಬಗ್ಗೆ ಹೇಳಿದ್ದಾರೆ. 'ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರಾವಾಹಿಯು ಕಿರುತೆರೆಯಾದ್ಯಂತ ಮನೆ ಮಾತಾಗಿದ್ದು ಜನರು ಅದನ್ನು ಇಷ್ಟಪಟ್ಟಿದ್ದಾರೆ. ಮಾತ್ರವಲ್ಲ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಧಾರಾವಾಹಿ ಮುಗಿಯುತ್ತಿರುವ ವಿಚಾರ ನಿಜಕ್ಕೂ ಬೇಸರ ತಂದಿದೆ'.
'ಆದರೆ ಸೀತಾ ವಲ್ಲಭ ಸೀಕ್ವೆಲ್ ಬರುತ್ತಿದೆ ಎಂಬ ವಿಚಾರ ನಮಗೆ ತಡವಾಗಿ ತಿಳಿದಿದೆ. ಇದನ್ನು ಕೇಳಿ ನಾವು ಶಾಕ್ ಆಗಿದ್ದು ನಿಜ. ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾನೂ ಪಾತ್ರಧಾರಿ ಎನ್ನುವುದಕ್ಕೆ ಬಹಳ ಸಂತೋಷ ಇದೆ. ಈ ಧಾರಾವಾಹಿ ಒಡಿಯಾ, ಬೆಂಗಾಳಿ, ಮರಾಠಿ ಭಾಷೆಗಳಿಗೆ ಡಬ್ ಆಗಿದೆ. ಇದರ ಜೊತೆಗೆ ಯುಕೆಯಲ್ಲಿ ಇದು 'ದಿಲ್ ಕಾ ರಿಶ್ತಾ' ಹೆಸರಿನಲ್ಲಿ ಪ್ರಸಾರ ಕಂಡಿತ್ತು. ಅಲ್ಲಿರುವವರು ಧಾರಾವಾಹಿ ನೋಡಿ ತಮ್ಮ ಅಭಿಪ್ರಾಯ ತಿಳಿಸುವಾಗ ಬಹಳ ಸಂತಸವಾಗುತ್ತಿತ್ತು' ಎಂದು ಹೇಳುತ್ತಾರೆ ಜಗನ್ ಚಂದ್ರಶೇಖರ್.
ಅಂದ ಹಾಗೆ ಸೀತಾ ವಲ್ಲಭ ಧಾರಾವಾಹಿ ಭಾಗ 2ರಲ್ಲಿ ನಾಯಕ, ನಾಯಕಿಯಾಗಿ ಜಗನ್ ಚಂದ್ರಶೇಖರ್ ಹಾಗೂ ನಾಯಕಿಯಾಗಿ ಸುಪ್ರಿತಾ ಸತ್ಯನಾರಾಯಣ ಇರಲಿದ್ದಾರಾ ಅಥವಾ ಅವರ ಜಾಗಕ್ಕೆ ಬೇರೆ ಕಲಾವಿದರು ಬರಲಿದ್ದಾರಾ ಎಂಬುದನ್ನು ಕಾದು ನೋಡಬೇಕು.