ಬಿಂದು ಅಂತಲೇ ಖ್ಯಾತಿಯಾಗಿರುವ ಶಿವಮೊಗ್ಗ ಮೂಲದ ಮೋಹಿರಾ ಆಚಾರ್ಯ ನಟನಾ ಲೋಕಕ್ಕೆ ಕಾಲಿಟ್ಟಿದ್ದು ಆಕಸ್ಮಿಕವಂತೆ. ‘ಕನ್ನಡತಿ’ಯಲ್ಲಿ ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸುತ್ತಿರುವ ಮೋಹಿರಾ ಆಚಾರ್ಯ ಅವರು ಭುವಿಗೆ ಮಾತ್ರವಲ್ಲ, ಕರ್ನಾಟಕದ ಎಲ್ಲಾ ಅಕ್ಕಂದಿರಿಗೂ ಮುದ್ದಿನ ತಂಗಿಯಾಗಿದ್ದಾರೆ.

ಶಿವಮೊಗ್ಗ ಮೂಲದ ಮೋಹಿರಾ ಆಚಾರ್ಯ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಎಂಜನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ನಟಿಸಲು ಅವಕಾಶ ಪಡೆದರು. ‘ಪ್ರೇಮಲೋಕ’ ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದರು.
ಕನ್ನಡತಿಯಲ್ಲಿ ಭುವಿ-ಬಿಂದು ಪಾತ್ರವನ್ನು ಅದ್ಭುತವಾಗಿ ತೋರಿಸಲಾಗಿದೆ. ‘ಕನ್ನಡತಿ’ಯಲ್ಲಿ ನಟಿಸಿದ ಬಳಿಕ ಒಳ್ಳೆಯ ಆಫರ್ ಗಳನ್ನು ಪಡೆಯುತ್ತಿದ್ದಾರೆ ಮೋಹಿರಾ ಆಚಾರ್ಯ. ಈಗಾಗಲೇ ತೆಲುಗು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಸಿನಿಮಾದಲ್ಲೂ ನಟಿಸುವ ಆಸೆಯಿದೆಯಂತೆ. ಮೋಹಿರಾ ಆಚಾರ್ಯ ಅವರಿಗೆ ಎಲ್ಲಾ ರೀತಿಯ ಪಾತ್ರಗಳಲ್ಲೂ ಅಭಿನಯಿಸುವ ಆಸೆಯಿದೆ. ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನೂ ಸಕ್ರಿಯವಾಗಿರದಿದ್ದರೂ ಸಹ ಮೋಹಿರಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.