ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಅಮ್ಮ ಪಾತ್ರದ ಸುಹಾಸಿನಿ ಆಗಿ ಅಭಿನಯಿಸುತ್ತಿರುವ ಅರ್ಚನಾ ಅವರು ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈಗ ಅವರ ಜಾಗಕ್ಕೆ ಸ್ವಾತಿ ಬರುತ್ತಾರೆ ಎಂಬ ವಿಚಾರ ಕಿರುತೆರೆ ವೀಕ್ಷಕರಿಗೆ ಈಗಾಗಲೇ ತಿಳಿದಿತ್ತು. ಇದೀಗ ಇದೇ ಸೋಮವಾರದಿಂದ ಸುಹಾಸಿನಿ ಆಗಿ ಸ್ವಾತಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿಯಲ್ಲಿ ನಾಯಕ ಚಿರಂತ್ ಅಮ್ಮ ಆಗಿ ನಟಿಸುತ್ತಿದ್ದ ಸ್ವಾತಿ, ಇದೀಗ ಗಟ್ಟಿಮೇಳ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ಜನಪ್ರಿಯ ಧಾರಾವಾಹಿಯ ಭಾಗವಾಗಿರುವುದಕ್ಕೆ ಸ್ವಾತಿ ಅವರಿಗೆ ಬಹಳವೇ ಖುಷಿಯಾಗಿದೆಯಂತೆ.
"ಇಷ್ಟು ದಿನ ಸುಹಾಸಿನಿ ಆಗಿ ಅರ್ಚನಾ ಅವರು ನಟಿಸಿದ್ದರು. ಇದೀಗ ಅವರು ಧಾರಾವಾಹಿಯಿಂದ ಹೊರಬಂದ ಕಾರಣ ಅವರ ಜಾಗಕ್ಕೆ ನಾನು ಬಂದಿದ್ದೇನೆ. ಪಾತ್ರ ಒಂದೇ, ಆದರೆ ವ್ಯಕ್ತಿ ಬೇರೆ. ನಿಜಕ್ಕೂ ಇದು ತುಂಬಾ ಚಾಲೆಂಜಿಗ್ ಕೆಲಸ. ಯಾಕೆಂದರೆ ಈ ಮೊದಲು ಸುಹಾಸಿನಿ ಆಗಿದ್ದವರು ಜನರ ಮನ ಸೆಳೆದು ಬಿಟ್ಟಿದ್ದಾರೆ. ಇದೀಗ ಅವರ ಜಾಗಕ್ಕೆ ನಾನು ಬಂದಿದ್ದೇನೆ. ಜನ ನನ್ನನ್ನು ಯಾವ ರೀತಿ ಸ್ವೀಕರಿಸುತ್ತಾರೆ ನೋಡಬೇಕಾಗಿದೆ. ಪಟ್ಟಿಯಲ್ಲಿ ಗಟ್ಟಿಮೇಳ ಧಾರಾವಾಹಿಯ ಭಾಗವಾಗಿ ನಾನು ಇದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ" ಎನ್ನುತ್ತಾರೆ ಸ್ವಾತಿ.
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಸ್ವಾತಿ ಶುಭ ವಿವಾಹ ಧಾರಾವಾಹಿಯಲ್ಲಿ ಊರ್ಮಿಳಾ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಇದು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಮಂಡೋದರಿ ಪಾತ್ರಕ್ಕೆ ಜೀವ ತುಂಬಿದ್ದ ಇವರು, ರಂಗನಾಯಕಿಯಲ್ಲಿ ನಾಯಕನ ಅಮ್ಮ, ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಭೈರವಿ ಎಂಬ ನೆಗೆಟಿವ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.