ಇಂದು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಚುನಾವಣೆ ನಡೆಯಿತು. ಕನ್ನಡ ಸಿನಿಮಾ ಶಕ್ತಿ ಕೇಂದ್ರದ ವಾಣಿಜ್ಯ ಮಂಡಳಿಯಲ್ಲಿ ಅಧಿಕಾರದ ಗದ್ದುಗೆ ಯಾರು ಹಿಡಿಯುತ್ತಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿತು. ನಕಲಿ ಮತದಾರರ ಹಾವಳಿ ಸೇರಿ ನಾನಾ ಕಾರಣಗಳಿಂದ ತೀವ್ರ ಗೊಂದಲ ಉಂಟಾಗಿತ್ತು. ಆರೋಪ ಪ್ರತ್ಯಾರೋಪ ಕೇಳಿ ಬಂದಿದ್ದರಿಂದ ಚುನಾವಣೆ ಕಾತರ ಹೆಚ್ಚಿಸಿತ್ತು.
ಈ ಎಲ್ಲಾ ಗೊಂದಲಗಳ ನಿವಾರಣೆ ಬಳಿಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ಹಿರಿಯ ನಟಿ ಲೀಲಾವತಿ, ವಿನೋದ್ ರಾಜ್, ತಾರಾ, ಜಯಮಾಲಾ, ಥ್ರಿಲ್ಲರ್ ಮಂಜು ಸೇರಿದಂತೆ ಅನೇಕ ಗಣ್ಯರು ಬಂದು ತಮ್ಮ ಮತ ಚಲಾಯಿಸಿದರು. ಚುನಾವಣೆಗೂ ಮೊದಲೇ ವಿತರಕ ಗುಬ್ಬಿ ಜೈರಾಜ್ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಉಪಾಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಉಮೇಶ್ ಬಣಕಾರ್ ತಮ್ಮ ಎದುರಾಳಿ ಪ್ರಮೀಳಾ ಜೋಷಾಯ್ ಅವರನ್ನು ಸೋಲಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ ನಾಗಣ್ಣ ಆಯ್ಕೆಯಾದರು. ಇದಲ್ಲದೆ ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕ ಎಕ್ಸ್ಕ್ಯೂಸ್ಮಿ ಸುರೇಶ್ ಆಯ್ಕೆಯಾದರೆ, ಗೌರವ ಖಜಾಂಚಿಯಾಗಿ ವೆಂಕಟೇಶ್ ಕೆ ವಿ ಗೆಲುವಿನ ನಗೆ ಬೀರಿದರು.