ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಕಾಲಿರಿಸಿದ್ದ ದಿಶಾ ಮದನ್ ತಾಯ್ತನ ಎಂಜಾಯ್ ಮಾಡುವುದಕ್ಕಾಗಿ ಬಣ್ಣದ ಲೋಕಕ್ಕೆ ಬ್ರೇಕ್ ನೀಡಿದ್ದರು. ಸದ್ಯ ನಿರ್ದೇಶಕ ಪನ್ನಗಭರಣ ನಿರ್ದೇಶನದ "ಫ್ರೆಂಚ್ ಬಿರಿಯಾನಿ" ಸಿನಿಮಾದ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಟಿಕ್ ಟಾಕ್ ಸ್ಟಾರ್ ಆಗಿ ಫೇಮಸ್ ಆಗಿರುವ ದಿಶಾ ಮದನ್, ಸುಮಾರು ಮೂರು ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಪರಿಚಿತರಾದವರು. ಕುಲವಧು ಧಾರಾವಾಹಿಯ ವಚನಾ ಆಗಿ ಕಿರುತೆರೆ ಲೋಕದಲ್ಲಿ ಹೆಸರು ಗಳಿಸಿದ್ದ ದಿಶಾ ಮದನ್ ಗರ್ಭಿಣಿಯಾಗಿದ್ದ ಕಾರಣ ಕಿರುತೆರೆಗೆ ಬಾಯ್ ಹೇಳಿ ಹೋಗಿದ್ದರು. ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ದಿಶಾ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮುದ್ದು ಮಗ ವಿಯಾನ್ ನೊಂದಿಗೆ ಸಮಯ ಕಳೆಯುತ್ತಿರುವ ದಿಶಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ವಚನಾ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ದಿಶಾ ಮದನ್ 'ಹೇಟ್ ರೋಮಿಯೋ' ವೆಬ್ ಸೀರೀಸ್‌ನಲ್ಲಿ ಅಭಿನಯಿಸಿದ್ದರು. ಇದೀಗ ಕೊಂಚ ಸಮಯದ ಗ್ಯಾಪ್‌ನ ನಂತರ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಬರುತ್ತಿದ್ದಾರೆ ದಿಶಾ ಮದನ್. ಪನ್ನಗಭರಣ ನಿರ್ದೇಶನದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಅಭಿನಯಿಸಿರುವ ದಿಶಾ ಮದನ್ ಆ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

"ಫ್ರೆಂಚ್ ಬಿರಿಯಾನಿ ನಿಜವಾಗಿಯೂ ಒಂದು ಅದ್ಭುತ ಸಿನಿಮಾ. ಕೊರೊನಾ ಹಿನ್ನೆಲೆ ಇಂದು ಎಷ್ಟೋ ಮಂದಿ ಡಿಪ್ರೆಶನ್ ಹಂತಕ್ಕೂ ಹೋಗಿದ್ದಾರೆ. ಈ ಸಿನಿಮಾ ನೋಡಿದರೆ ಡಿಪ್ರೆಶನ್ ಖಂಡಿತಾ ಮಾಯವಾಗುತ್ತದೆ. ಯಾಕೆಂದರೆ, ಸಿನಿಮಾ ನೋಡಿದವರು ಮನಸಾರೆ ನಕ್ಕು ಎಂಜಾಯ್ ಮಾಡುವುದು ಖಂಡಿತಾ. ಜನರನ್ನು ರಂಜಿಸುವ ಕಥೆಯನ್ನು ಹೆಣೆದು ಸಿನಿಮಾ ತಯಾರಿಸಿದ್ದಾರೆ ನಿರ್ದೇಶಕ ಪನ್ನಗಭರಣ" ಎಂದು ಹೇಳುತ್ತಾರೆ ದಿಶಾ ಮದನ್.

ಅಂದಹಾಗೇ, ಸಣ್ಣ ಗ್ಯಾಪ್‌ನ ನಂತರ ತೆರೆಯ ಮೇಲೆ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ದಿಶಾ ಅವರು ಗರ್ಭಿಣಿಯಾಗಿದ್ದಾಗ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿದ್ದರು. ಪನ್ನಗ ಅವರಿಂದ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಫೋನ್ ಬಂದಾಗ ಓಕೆ ಎಂದ ದಿಶಾ, ಗರ್ಭಿಣಿ ಆಗಿದ್ದಾಗಲೇ ಬಣ್ಣ ಹಚ್ಚಿದ್ದರು. ಜೊತೆಗೆ ಡ್ಯಾನ್ಸ್, ಸ್ಟಂಟ್‌ಗಳಂತ ರಿಸ್ಕಿ ಸನ್ನಿವೇಶಗಳಲ್ಲೂ ಕಾಣಿಸಿದ್ದಾರೆ ದಿಶಾ.