ಕುಂದಾಪುರದ ಕುವರಿ ಭೂಮಿ ಶೆಟ್ಟಿ ಬಗ್ಗೆ ನಿಮಗೆ ಗೊತ್ತಾ? ಎಂದು ಯಾರನ್ನಾದ್ರೂ ಕೇಳಿದರೆ ಅವರು ಯಾರು ಎಂದು ಕೇಳುವವರೇ ಹೆಚ್ಚು. ಆದರೆ, ಕಿನ್ನರಿ ಧಾರಾವಾಹಿಯ ಮಣಿ ಗೊತ್ತಾ..? ಎಂದು ಕೇಳಿದರೆ ಹೋ..ಮಣಿನಾ..ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಂಬ ಉತ್ತರ ಸಿಗುವುದು ಗ್ಯಾರಂಟಿ.
![Bhoomi shetty](https://etvbharatimages.akamaized.net/etvbharat/prod-images/4789086_bhoomi2.jpg)
'ಕಿನ್ನರಿ' ಧಾರಾವಾಹಿಯ ಈ ಮುದ್ದು ಮುಖದ ಚೆಲುವೆ ವೀಕ್ಷಕರಿಗೆ ಇನ್ನೂ ಮಣಿ ಎಂದೇ ಪರಿಚಯ. ಆದರೆ ಆಕೆ ಹೆಸರು ಭೂಮಿ ಶೆಟ್ಟಿ. ಇದೀಗ ಈ ಕ್ಯೂಟಿ ಬಿಗ್ಬಾಸ್ 7 ರ ಸ್ಪರ್ಧಿ. ಮಹಾನಗರಿಗೆ ಓದಲು ಬಂದ ಭೂಮಿ ಆದದ್ದು ಮಾತ್ರ ನಟಿ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಜೀವನ ಚೈತ್ರ' ಧಾರಾವಾಹಿಗಾಗಿ ಆಡಿಷನ್ ಏರ್ಪಡಿಸಲಾಗಿತ್ತು. ಸ್ನೇಹಿತರ ಒತ್ತಾಯದ ಮೇರೆಗೆ ಧಾರಾವಾಹಿಯಲ್ಲಿ ಆಡಿಷನ್ಗೆ ಹೋದ ಭೂಮಿ ಕೊನೆಗೂ ನಟಿಯಾಗಿ ಆಯ್ಕೆ ಆಗಿಬಿಟ್ಟರು. ನಂತರ 'ಕಿನ್ನರಿ' ಧಾರಾವಾಹಿಯ ಮಣಿ ಆಗಿ ಬದಲಾದರು. ಮಣಿ ಪಾತ್ರಕ್ಕೆ ಆಯ್ಕೆಯಾಗಿದ್ದರ ಹಿಂದೆ ಕೂಡಾ ಒಂದು ಕಾರಣ ಇದೆ. ಬಾಲಕಿ ಮಣಿ ಪಾತ್ರ ಮಾಡುತ್ತಿದ್ದ ದಿಶಾ ರಾಮ್ಗೂ ಭೂಮಿಗೂ ಚೆನ್ನಾಗಿ ಹೋಲಿಕೆಯಾಗುತ್ತಿದ್ದರಿಂದ ಆ ಪಾತ್ರಕ್ಕೆ ಸುಲಭವಾಗಿ ಆಯ್ಕೆಯಾದರು.
![Kinnari](https://etvbharatimages.akamaized.net/etvbharat/prod-images/4789086_kin1.jpg)
ಇದಕ್ಕೂ ಮುನ್ನ ಭೂಮಿ ಆ ಧಾರಾವಾಹಿಯೇ ನೋಡಿರಲಿಲ್ಲವಂತೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಆಡಿಷನ್ಗೆ ಹೋದೆ, ಆಯ್ಕೆಯಾದದ್ದು ನಿಜಕ್ಕೂ ಆಶ್ಚರ್ಯ. ಏಕೆಂದರೆ ಕಿನ್ನರಿ ಪ್ರೋಮೋ ನೋಡಿದವರೆಲ್ಲಾ ನಿಜವಾಗಿಯೂ ಆ ಪುಟ್ಟ ಬಾಲಕಿಯೇ ಬೆಳೆದು ದೊಡ್ಡವಳಾದಳೇ ಎಂದು ಧಾರಾವಾಹಿ ತಂಡದವರನ್ನು ಪ್ರಶ್ನಿಸುತ್ತಿದ್ದರಂತೆ. ನಟನೆ ಜೊತೆಗೆ ಚಿತ್ರಕಲೆ, ಭರತನಾಟ್ಯ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಭೂಮಿ ಶೆಟ್ಟಿ ಇಂದಿಗೂ ಕಿರುತೆರೆ ವೀಕ್ಷಕರ ಪಾಲಿನ ಮಣಿ. ಧಾರಾವಾಹಿ ಮುಗಿದಿದ್ದರೂ ಇಂದಿಗೂ ಇವರ ಪಾತ್ರ ಜನರ ಮನಸ್ಸಿನಲ್ಲಿ ಉಳಿದಿದೆ. ಇದೀಗ ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ಕುಂದಾಪುರದ ಕುವರಿ ಅಲ್ಲಿ ಅದೆಷ್ಟು ದಿನ ಇರುತ್ತಾರೆ ಕಾದು ನೋಡಬೇಕು.
![Bhoomi shetty](https://etvbharatimages.akamaized.net/etvbharat/prod-images/4789086_bhoomi1.jpg)