ಕಲರ್ಸ್ ಕನ್ನಡ ವಾಹಿನಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ನಮಿತಾ ಎಂಬ ಖಳನಾಯಕಿ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿರುವ ಚೆಂದುಳ್ಳಿ ಚೆಲುವೆ ಚೈತ್ರಾ ಕೋಟೂರು ಇದೀಗ ಜಿಲ್ಲಾಧಿಕಾರಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ.
ಅಂದಹಾಗೆ ಚೈತ್ರಾ ಕೋಟೂರು ಜಿಲ್ಲಾಧಿಕಾರಿಯಾಗಿ ಅಭಿನಯಿಸುತ್ತಿರುವುದು ಕಿರುತೆರೆಯಲ್ಲಿ ಅಲ್ಲ, ಬದಲಿಗೆ ಹಿರಿತೆರೆಯಲ್ಲಿ. ಆಲ್ವಿನ್ ಫ್ರಾನ್ಸಿಸ್ ನಿರ್ದೇಶನದ 'ಒಂದು ದಿನ ಒಂದು ಕ್ಷಣ' ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ಜಿಲ್ಲಾಧಿಕಾರಿಯಾಗಿ ಚೈತ್ರಾ ಕೋಟೂರು ಕಾಣಿಸಿಕೊಳ್ಳಲಿದ್ದು, ಸಿನಿ ವೀಕ್ಷಕರಿಗೆ ಮನರಂಜನೆ ನೀಡಲು ಮುಂದಾಗಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಹಿರಿತೆರೆಯಲ್ಲಿ ಮಿಂಚುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರೆತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಇದರಲ್ಲಿ ನನ್ನದು ತುಂಬಾ ಸಣ್ಣ ಪಾತ್ರವಾಗಿದೆ ನಿಜ. ಆದರೆ ಅದರಿಂದ ಕಥೆಗೆ ಟ್ವಿಸ್ಟ್ ದೊರಕಲಿದೆ ಎಂದು ಹೇಳುತ್ತಾರೆ ಚೈತ್ರಾ ಕೋಟೂರು.
ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಚೈತ್ರಾ ಕೋಟೂರು, ಲಗ್ನ ಪತ್ರಿಕೆ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದರು. ಇತ್ತೀಚೆಗಷ್ಟೇ ಹುಡುಗರು ತುಂಬಾ ಒಳ್ಳೆಯವರು ಎಂಬ ರ್ಯಾಪ್ ಹಾಡಿನ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿದ್ದ ಚೈತ್ರಾ, ಹೊಸ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.