ಚಿತ್ರ : ದಮಯಂತಿ,
ನಿರ್ಮಾಪಕರು : ನವರಸನ್
ಛಾಯಾಗ್ರಹಣ : ಪಿ ಕೆ ಎಚ್ ದಾಸ್,
ಸಂಗೀತ : ಆರ್ ಎಸ್ ಗಣೇಶ್ ನಾರಾಯಣ್,
ಇತ್ತೀಚಿಗೆ ಬಿಡುಗಡೆಯಾದ ‘ಮನೆ ಮಾರಾಟ್ಟಕ್ಕಿದೆ’ ಹಾಗೂ ಈ ‘ದಮಯಂತಿ’ ಚಿತ್ರಕ್ಕೂ ಬೇಜಾನ್ ಹೋಲಿಕೆ ಇದೆ. ಈ ಎರಡು ಚಿತ್ರಕ್ಕೆ ‘ಆನಂದೋ ಬ್ರಹ್ಮ’ (2017 ತೆಲುಗು ಸಿನಿಮಾ) ಸ್ಪೂರ್ತಿ ಆಗಿದೆ. ‘ಮನೆ ಮಾರಾಟ್ಟಕ್ಕಿದೆ’ ರೀಮೇಕ್ ಎಂದು ಹೇಳಿ ಮಾಡಿದ್ದರು ನಿರ್ಮಾಪಕ ಎಸ್ ವಿ ಬಾಬು ಹಾಗೂ ನಿರ್ದೇಶಕ ಮಂಜು ಸ್ವರಾಜ್. ಆದರೆ ನವರಸನ್ ಹೇಳದೆ ಸ್ಪೂರ್ತಿ ಪಡೆದಿದ್ದಾರೆ. ರೀಮೇಕ್ ಮಾಡುವಾಗ ಬದಲಾವಣೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ.
ಇಷ್ಟಾದರೂ ‘ದಮಯಂತಿ’ ಮೊದಲಾರ್ಧ ಪ್ರೇಕ್ಷಕ ನೀಡಿದ ಹಣಕ್ಕೆ ಒಳ್ಳೆಯ ಮನರಂಜನೆ ಸಿಕ್ಕಿ ಬಿಡುತ್ತದೆ. ಇನ್ನುಳಿದ ಭಾಗ ಸೇಡಿನ ಕಥೆ. ಪ್ರೇಕ್ಷಕ ಎಣಿಕೆ ಹಾಕಿದ್ದೆ ದ್ವಿತೀಯ ಭಾಗದಲ್ಲಿ ಸಂಭವಿಸುತ್ತದೆ. ರಾಧಿಕಾ ಕುಮಾರಸ್ವಾಮಿ ಎರಡು ಅವತಾರ ಎತ್ತಿದ್ದಾರೆ. ರುದ್ರ ರೂಪದಲ್ಲಿ ಅವರು ಹೆಚ್ಚು ಪರಾಕ್ರಮ ತೋರಿದ್ದಾರೆ.
ಒಂದು ದೊಡ್ಡ ಬಂಗಲೆ ಇದೆ. ಅದನ್ನು ದೆವ್ವದ ಕಾಟ ಎಂದು ಯಾರು ಕೊಳ್ಳುತ್ತಿಲ್ಲ. ಇದಕ್ಕೆ ವಾರಸ್ದಾರ ಒಂದು ಯೋಜನೆ ಬಿಗ್ ಬಾಸ್ ರೀತಿಯಲ್ಲಿ ರೂಪಿಸುತ್ತಾನೆ. 10 ಲಕ್ಷ ಗೆದ್ದವರಿಗೆ ಬಹುಮಾನ. ಈ ಆಟದಿಂದ ಎಲ್ಲರಿಗೆ ಇಲ್ಲಿ ದೆವ್ವ ಇಲ್ಲ ಎಂದು ಹೇಳುವುದು. ಆಮೇಲೆ ಮನೆ ಮಾರಾಟ ಮಾಡಿಕೊಳ್ಳುವುದು.
ಈ ಬಂಗಲೆಗೆ ಆಟಕ್ಕೆ ಬರುವವರು ಡಿಡಿ ಬಾಸ್ ಹೆಸರಿನಲ್ಲಿ ತಬಲಾ ನಾಣಿ, ಪವನ್, ಗಿರಿ, ಮಿತ್ರ ಹಾಗೂ ಇಬ್ಬರು ಹುಡುಗಿಯರು. ಇಲ್ಲಿ ಪ್ರತಿಯೊಬ್ಬರಿಗೂ ಟಾಸ್ಕ್ ಇದೆ. ಅದನ್ನು ನಿರ್ವಹಿಸುವುದು ಅವರ ಕೆಲಸ. ಆ ಆರು ಜನರಿಗೆ ವಿವಿದ ಕಾರಣಗಳಿಗೆ ದುಡ್ಡು ಬೇಕಾಗಿದೆ. ಚಿತ್ರದ ಮೊದಲಾರ್ಧ ನಾಲ್ಕು ದಿವಸಗಳ ಆಟದಲ್ಲಿ ಕಳೆಯುವುದು. ಈ ಟಾಸ್ಕ್ ನಿರ್ವಹಣೆ ವಿಚಾರವೆ ಮಜಾ ಕೊಡುವ ವಿಚಾರ ಸಹ. ಈ ಬಂಗಲೆಯಲ್ಲಿ ಒಂದು ಕೋಣೆ ಇದೆ. ಅದನ್ನು ಯಾರು ಓಪನ್ ಮಾಡುವಂತಿಲ್ಲ. ಆದರೆ ಕೂಡಿದ ಮತ್ತಿನಲ್ಲಿ ತಬಲ ನಾಣಿ (ಭಟ್ಟನ ಪಾತ್ರದಾರಿ) ಬಾಗಿಲು ಒಡೆಯುವುದು ಅವಾಂತರಕ್ಕೆ ಕಾರಣ ಆಗುತ್ತದೆ.
ಆ ಕೋಣೆ ಇಂದಲೇ ವಿಚಿತ್ರ ತಿರುವು ಸಹ ಚಿತ್ರಕ್ಕೆ ಮೆಟ್ಟಿಕೊಳ್ಳುತ್ತದೆ. ಅಲ್ಲಿಂದ ಆಗಮನ ಆಗಿ ದಮಯಂತಿ ಕಥೆ ಪ್ರಾರಂಭವಾಗುತ್ತದೆ. ದಮಯಂತಿ ಪೂರ್ವ ಜನ್ಮದ ಕಥೆ ಸಹ ಅನಾವರಣಗೊಳ್ಳತ್ತದೆ. ಅದು ಮಾಮೂಲು ಆದ ಕಥಾ ವಸ್ತು. ಈ ಭಾಗದಲ್ಲಿ ದಮಯಂತಿ ವರ್ಸರ್ ಭಜರಂಗಿ ಲೋಕಿ ಪಾತ್ರ ಮುಖ್ಯವಾಗುತ್ತದೆ. ದಮಯಂತಿ ತನ್ನ ಸೇಡನ್ನು ಹೇಗೆ ತೀರಿಸಿಕೊಳ್ಳುತ್ತಾಳೆ ಎಂಬುದು ಮುಂದಿನ ವಿಚಾರ.ಆಮೇಲೆ ಏನಾಯಿತು ಎಂಬುದನ್ನೂ ನೀವು ತೆರೆಯ ಮೇಲೆ ನೋಡಬೇಕು.
ಮೊದಲಾರ್ಧದಲ್ಲಿ ತಬಲಾ ನಾಣಿ, ಪವನ್, ಮಿತ್ರ ಹಾಗೂ ಗಿರಿ ಪ್ರೇಕ್ಷಕರ ಪೈಸಾ ವಸೂಲ್ ಮಾಡಿ ಬಿಡುತ್ತಾರೆ. ಅವರ ಕಾಮಿಡಿ ಟೈಮಿಂಗ್ ಅಷ್ಟು ಸೊಗಸಾಗಿದೆ. ತಬಲಾ ನಾಣಿ ಹಾಗೂ ಪವನ್ ಕಾಮಿಡಿ ಭಾಗಗಳು ಹೆಚ್ಚು ಗಮನ ಸೆಳೆಯುತ್ತದೆ.
ರಾಧಿಕಾ ಕುಮಾರಸ್ವಾಮಿ ಪಾತ್ರ ಪೋಷಣೆಯಲ್ಲಿ ಅವರಿಗೆ ಮಾಡಿರುವ ಮೇಕಪ್ ಎದ್ದು ಕಾಣುತ್ತದೆ. ರೋಷಾಗ್ನಿಯಾಗಿ ಅವರು ಆರ್ಭಟಿಸುತ್ತಾರೆ. ಭಜರಂಗಿ ಲೋಕಿ ಅವರ ಪಾತ್ರವನ್ನು ಸುಲಭವಾಗಿ ನಿರ್ವಹಿಸಿದ್ದಾರೆ. ಮಂತ್ರವಾದಿ ಆಗಿ ನವೀನ್ ಕೃಷ್ಣ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಆರ್ ಎಸ್ ಗಣೇಶ್ ನಾರಾಯಣ್ ಅವರ ಹಿನ್ನಲೆ ಸಂಗೀತ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಡುಗಳಿಗೆ ಅವಕಾಶ ಹೆಚ್ಚು ಇಲ್ಲ. ಛಾಯಾಗ್ರಾಹಕ ಪಿ ಕೆ ಎಚ್ ದಾಸ್ ಪ್ರತಿ ದೃಶ್ಯವನ್ನು ತಮ್ಮ ನಿಪುಣತೆ ಇಂದ ಕಾಪಾಡಿದ್ದಾರೆ. ಮೊದಲಾರ್ಧ ತಮಾಷೆ, ಆಮೇಲೆ ಸಾಹಸ ಹಾಗೂ ಸುಖಾಂತ್ಯವಾಗುತ್ತದೆ.