ನಾಲ್ಕು ಅನಾಥ ಹೆಣ್ಣು ಮಕ್ಕಳ ಕಥೆ ಹೊಂದಿರುವ 'ಪುಣ್ಯಾತ್ಗಿತ್ತೀರು' ಸಿನಿಮಾ ಇಂದು ತೆರೆ ಕಂಡಿದೆ. ಮೊದಲ ನಿರ್ದೇಶನದಲ್ಲೇ ರಾಜ್ ಬಿ. ಎನ್ ಯಶಸ್ಸು ಕಂಡಿದ್ದಾರೆ ಎನ್ನಬಹುದು. ಮಮತಾ ರಾಹುತ್, ದಿವ್ಯಶ್ರೀ, ಐಶ್ವರ್ಯ, ಸಂಭ್ರಮ ಸ್ನೇಹಿತೆಯರಾಗಿ ಚಿತ್ರದಲ್ಲಿ ನಟಿಸಿದ್ದಾರೆ.
ನಾಯಕಿಯರ ಶಕ್ತಿ ಪ್ರದರ್ಶನ, ತ್ಯಾಗಮಯ ಕಥಾ ವಸ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆರ್ಟಿಸ್ಟ್ ಆರತಿ ಆಗಿ ಮಮತಾ ರಾವುತ್, ಬಾಯಿ ಬಡಕಿ ಭವ್ಯ ಆಗಿ ಐಶ್ವರ್ಯ, ಮೀಟರ್ ಮಂಜುಳ ಆಗಿ ದಿವ್ಯಶ್ರಿ, ಸುಳ್ಳಿ ಸುಜಾತ ಆಗಿ ಸಂಭ್ರಮ ನಟಿಸಿದ್ದಾರೆ. ನಿರೂಪಕಿ ಆಗಬೇಕೆಂಬ ಆಸೆ ಹೊತ್ತಿರುವ ಆರತಿ, ರೆಡಿಯೋ ಜಾಕಿ ಐಶ್ವರ್ಯ, ಸುಳ್ಳು ಹೇಳುತ್ತಾ ಕಾಲ ಕಳೆಯುವ ದಿವ್ಯಶ್ರೀ, ಮಚ್ಚು, ಲಾಂಗು ಹಿಡಿದು ಅಬ್ಬರಿಸುವ ಸಂಭ್ರಮ ಮೊದಲಾರ್ಧವನ್ನು ಆಕ್ರಮಿಸಿಕೊಂಡಿದ್ದಾರೆ. ನಮಗೆ ಯಾವ ರೌಡಿಯನ್ನಾದರೂ ಎದುರು ಹಾಕಿಕೊಳ್ಳುವ ತಾಕತ್ತು ಇದೆ ಎಂಬುದನ್ನು ಈ ನಾಲ್ವರೂ ತೋರಿಸುತ್ತಾರೆ. ಎದುರಾಳಿಗಳ ಪಿತೂರಿಯಿಂದ ಈ ನಾಲ್ವರೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಹೊತ್ತು ಪೊಲೀಸ್ ಠಾಣೆವರೆಗೂ ಹೋಗಿ ಬರುತ್ತಾರೆ. ಆದರೆ ನಿಷ್ಠಾವಂತ ಪೊಲೀಸ್ ಅಧಿಕಾರಿಯ ತಪ್ಪು ಗ್ರಹಿಕೆಯಿಂದ ಇವರು ಬಚಾವ್ ಆಗುತ್ತಾರೆ.
ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಾದ ಡಾ.ರಾಜ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಶಂಕರ್ ನಾಗ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸುಧೀರ್ ಗೆಲುವಿನ ಹಿಂದೆ ಅವರ ಮಡದಿಯರ ಪ್ರೋತ್ಸಾಹದ ಬಗ್ಗೆ ರಚಿಸಿರುವ ಹಾಡು ಬಹಳ ಚೆನ್ನಾಗಿದೆ. ರಾಮಾನುಜ ಸಂಗೀತ ನಿರ್ದೇಶನದ ಎರಡು ಹಾಡುಗಳು ಕೇಳಲು ಇಂಪಾಗಿವೆ. ಶೋಭರಾಜ್, ಶೋಭ (ಇತ್ತೀಚಿಗೆ ನಿಧನರಾದ ಮಗಳು ಜಾನಕಿ ಖ್ಯಾತಿಯ ಮಂಗಳತ್ತೆ) ಬಾಲ ಕಲಾವಿದ ಪ್ರಸನ್ನ, ಹಾಸ್ಯ ನಟ ಕುರಿ ರಂಗ, ಮೀಸೆ ಅಂಜನಪ್ಪ ನಟನೆ ಇಷ್ಟವಾಗುತ್ತದೆ. ತಿಥಿ ಖ್ಯಾತಿಯ ಪೂಜಾ ಕೂಡಾ ಸಿನಿಮಾದಲ್ಲಿ ಬಂದು ಹೋಗುತ್ತಾರೆ. ಶರತ್ ಕುಮಾರ್ ಛಾಯಾಗ್ರಹಣ ಕೂಡಾ ಓಕೆ. 'ಪುಣ್ಯಾತ್ಗಿತ್ತೀರು' ಹೆಸರಿಗೆ ತಕ್ಕಂತೆ ಸಿನಿಮಾದಲ್ಲಿ ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಒಮ್ಮೆ ನೋಡಲು ಅಡ್ಡಿಯಿಲ್ಲ.