ಕೆಜಿಎಫ್ ಚಿತ್ರಕ್ಕೂ ಮುನ್ನ ಜಯಣ್ಣ ನಿರ್ಮಾಣದ 'ಮೈ ನೇಮ್ ಈಸ್ ಕಿರಾತಕ' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು ಯಶ್. ಈ ಚಿತ್ರದ ಸ್ವಲ್ಪ ಚಿತ್ರೀಕರಣ ಸಹ ಆಗಿತ್ತು. ಆದರೆ, ಆ ನಂತರ ಕೆಜಿಎಫ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ಯಶ್, 'ಮೈ ನೇಮ್ ಈ ಕಿರಾತಕ' ಚಿತ್ರವನ್ನು ಕೈಬಿಟ್ಟರು. ಇನ್ನು ಆ ಚಿತ್ರ ಮುಂದುವರೆಯುವುದಿಲ್ಲ. ಈ ನಿಟ್ಟಿನಲ್ಲಿ ತಮ್ಮಿಂದ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬ ಕಾರಣಕ್ಕೆ ಅವರು 13 ಕೋಟಿ ರೂ ವಾಪಸ್ ಮರಳಿಸಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿದೆ.
ಈ ವಿಷಯ ನಿಜವಾ ಎಂದರೆ ಅರ್ಧ ನಿಜ, ಅರ್ಧ ಸುಳ್ಳು ಎನ್ನುತ್ತಾರೆ ಜಯಣ್ಣ. ಯಶ್ ದುಡ್ಡು ಮರಳಿಸಿರುವುದು ನಿಜವಾದರೂ, 13 ಕೋಟಿಯಷ್ಟೇನೂ ವಾಪಸ್ ಕೊಟ್ಟಿಲ್ಲ ಎನ್ನುತ್ತಾರೆ. ಕೆಜಿಎಫ್ ಶುರುವಾಗುವುದಕ್ಕೂ ಮುನ್ನ ಕಿರಾತಕ ಚಿತ್ರಕ್ಕೆ 20 ದಿನಗಳಷ್ಟು ಚಿತ್ರೀಕರಣ ಆಗಿತ್ತು. ಆ ನಂತರ ಅವರು ಕೆಜಿಎಫ್ನಲ್ಲಿ ತೊಡಗಿಸಿಕೊಂಡಿದ್ದರಿಂದ, ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ. ಚಿತ್ರ ನಿಂತು ಹೋಗಿದ್ದರಿಂದ 20 ದಿನಗಳ ಶೂಟಿಂಗ್ಗೆ ಇನ್ನೊಂದಿಷ್ಟು ಸೇರಿಸಿ ಹಣ ಕೊಟ್ಟಿದ್ದಾರೆ. 13 ಕೋಟಿ ರೂ. ಎನ್ನುವುದೆಲ್ಲ ಸುಳ್ಳು. 20 ದಿನಗಳ ಚಿತ್ರೀಕರಣಕ್ಕೆ ಅಷ್ಟೆಲ್ಲ ಆಗುವುದಿಲ್ಲ. ಆದರೆ, ಚಿತ್ರಕ್ಕೆ ಪಡೆದ ಅಡ್ವಾನ್ಸ್ ಜತೆಗೆ ಇನ್ನೊಂದಿಷ್ಟು ಸೇರಿಸಿ ಕೊಟ್ಟಿರುವುದು ನಿಜ ಎನ್ನುತ್ತಾರೆ ಜಯಣ್ಣ.
ಯಶ್ ದುಡ್ಡು ಕೊಡುವುದಕ್ಕೆ ಬಂದಾಗ ಜಯಣ್ಣ ಬೇಡ ಎಂದರಂತೆ. ಏಕೆಂದರೆ, ಯಶ್ಗೆ ಜಯಣ್ಣ ಅವರಿಂದ ಅದೆಷ್ಟು ಸಹಾಯವಾಗಿದೆಯೋ, ಜಯಣ್ಣಗೂ ಯಶ್ ಅವರಿಂದ ಅಷ್ಟೇ ಸಹಾಯವಾಗಿದೆ. ಅದೇ ಕಾರಣಕ್ಕೆ ದುಡ್ಡು ಬೇಡ, ನಿಮ್ಮಿಂದ ನಮಗೆ ಒಳ್ಳೆಯದಾಗಿದೆ ಎಂದು ಹೇಳಿದ್ದರಂತೆ. ಆದರೆ, ತೊಂದರೆ ಎಂದು ಯಶ್ ಹಿಂದಿರುಗಿಸಿದ್ದಾಗಿ ಯಶ್ ಹೇಳಿದ್ದಾರೆ.
ಹಾಗಾದರೆ, ಇನ್ನು ಆ ಚಿತ್ರ ಮುಂದುವರೆಯುವುದಿಲ್ಲವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕಷ್ಟ ಎನ್ನುತ್ತಾರೆ. ಕಾರಣ, ಕಿರಾತಕ ಒಂದು ಮಂಡ್ಯ ನೇಟಿವಿಟಿಯ ಚಿತ್ರ. ಅದನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ರೂಪಿಸುವುದು ಕಷ್ಟ. ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಇಟ್ಟಿರುವ ಯಶ್ ಒಪ್ಪಿದರೆ ಮಾತ್ರ ಅದನ್ನು ಮುಂದುವರೆಸಬಹುದು ಎನ್ನುತ್ತಾರೆ.