ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದೆ ವಿನಯಾ ಪ್ರಸಾದ್ (ವಿನಯಾ ಪ್ರಕಾಶ್). ಸದ್ಯಕ್ಕೆ ನ್ಯಾಯಾಧೀಶೆ ಪಾತ್ರದಲ್ಲಿ ಕನ್ನಡದ ‘ತಮಟೆ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅವರು, ಒಂದು ವರ್ಷದಲ್ಲಿ ತಯಾರಿ ಮಾಡಿಕೊಂಡು 2021ಕ್ಕೆ ಮತ್ತೆ ನಿರ್ದೇಶನಕ್ಕೆ ಬರುತ್ತೇನೆ ಎಂದು ನಿಶ್ಚಯಿಸಿದ್ದಾರೆ.
ಕಡಿಮೆ ಬಜೆಟ್ನಲ್ಲಿ, ಕಡಿಮೆ ಅವಧಿಯಲ್ಲಿ ತಯಾರಾಗಿ, 2017 ರಲ್ಲಿ ಬಿಡುಗಡೆಯಾದ ವಿನಯಾ ಪ್ರಸಾದ್ ಅವರ ‘ಲಕ್ಷ್ಮಿ ನಾರಾಯಣ ಪ್ರಪಂಚವೇ ಬೇರೆ’ ಎಂಬ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಉಳಿಯಲಿಲ್ಲ. ವಿನಯಾ ಅವರ ಪತಿ ಜ್ಯೋತಿ ಪ್ರಕಾಶ್ ಅವರ ಕಥೆ, ಚಿತ್ರಕಥೆ, ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗಿತ್ತು. ಇದೇ ಚಿತ್ರಕ್ಕೆ ನಟ ಮಂಜುನಾಥ್ ಹೆಗ್ಡೆ ಅವರಿಗೆ ಪೋಷಕ ಕಲಾವಿದ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಬಂದಿತ್ತು. ಆದರೆ, ಹಾಕಿದ ಹಣ, ಟಿವಿ ರೈಟ್ಸ್ ಕಲರ್ಸ್ ಕನ್ನಡ ವಾಹಿನಿಗೆ ಕೊಟ್ಟ ಮೇಲೆ ಸ್ವಲ್ಪ ಲಾಸ್ ಆಯಿತು ಎಂದು ಹೇಳಿಕೊಳ್ಳುವ ವಿನಯಾ, ಈ ಸಿನಿಮಾದಿಂದ ನಿರ್ದೇಶಕಿಯಾಗಿ ಪಡೆದ ಅನುಭವ ನಿಜಕ್ಕೂ ಚನ್ನಾಗಿತ್ತು ಅಂತಾರೆ.
ವಿನಯಾ ಪ್ರಸಾದ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಾ ಇರುವಾಗ ಮದನ್ ಪಟೇಲ್ ಅವರ ಸಂಗೀತ ಕೇಳಿಕೊಂಡು ಬಂದವರು. ಈಗ ಅವರ ಪುತ್ರ ಮಯೂರ್ ಪಟೇಲ್ ನಿರ್ದೇಶನದ ಚಿತ್ರಕ್ಕೆ ಆಹ್ವಾನ ಬಂದಾಗ ಇಲ್ಲ ಎನ್ನಲಾಗಲಿಲ್ಲ ಎನ್ನುತ್ತಾರೆ. ಈ ಸಿನಿಮಾ ಅಲ್ಲದೇ ಅವರು ಕೆಲವು ಮಲಯಾಳಂ ಹಾಗೂ ಕನ್ನಡ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.
ವಿನಯಾ ಅವರು, ಕಥೆ ಹಾಗೂ ಚಿತ್ರಕಥೆ ಬಗ್ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಮತ್ತೊಂದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. 2021 ಆರಂಭದಲ್ಲಿ ನಿರ್ದೇಶನ ಆಗಬಹುದು ಎಂಬುದು ಅವರ ಲೆಕ್ಕಾಚಾರ.