ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ೧೦ ನೇ ಪುಣ್ಯಸ್ಮರಣೆ. ಅಭಿನಯ ಭಾರ್ಗವ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ ಹತ್ತು ವರ್ಷಗಳು ಕಳೆದಿವೆ. ಆದರೂ ವಿಷ್ಣುದಾದನ ಮೇಲಿನ ಅಭಿಮಾನ ಮಾತ್ರ ಅಭಿಮಾನಿ ದೇವರುಗಳಲ್ಲಿ ಕೊಂಚವೂ ಕಡಿಮೆಯಾಗಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಯಲ್ಲಿ ಅಭಿಮಾನಿಗಳು 'ಯಜಮಾನ'ನ ಸ್ಮರಣೆ ಮಾಡುತ್ತಿದ್ದಾರೆ. ವಿಷ್ಣುವಿನ 10 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನ, ನೇತ್ರದಾನ, ರಕ್ತದಾನ ಮಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ಸಾವಿರಾರು ಅಭಿಮಾನಿಗಳು ವಿಷ್ಣು ಸಮಾಧಿ ಕಡೆಗೆ ಧಾವಿಸುತ್ತಿದ್ದು, ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಪ್ರತಿವರ್ಷದಂತೆ ಈ ವರ್ಷ ವಿಷ್ಣು ಸಮಾಧಿ ಬಳಿ ಅಭಿಮಾನಿಗಳು ಸಮಾಧಿಗಾಗಿ ಮಾಡುತ್ತಿದ್ದ ಹೋರಾಟ ತಣ್ಣಗಾಗಿದೆ. ಮೈಸೂರಿನಲ್ಲಿ ಈಗಾಗಲೇ ವಿಷ್ಣು ಸ್ಮಾರಕಕ್ಕೆ ಗುದ್ದಲಿ ಪೂಜೆ ನಡೆದಿದ್ದು, ಕೆಲಸ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ಕಳೆದ ೯ ವರ್ಷಗಳಿಂದ ಸ್ಮಾರಕಕ್ಕಾಗಿ ಹೋರಾಟ ಮಾಡುತ್ತಿದ್ದ ವಿಷ್ಣು ಅಭಿಮಾನಿಗಳಿಗೆ ಕೊನೆಗೂ ಜಯ ಸಿಕ್ಕಿದೆ. ಈ ವರ್ಷ ಯಾವುದೇ ಪ್ರತಿಭಟನೆ ಇಲ್ಲದೆ ಅಭಿಮಾನಿಗಳು ಶಾಂತಿಯುತವಾಗಿ ವಿಷ್ಣುದಾದಾ ಪುಣ್ಯಸ್ಮರಣೆ ಮಾಡುತ್ತಿದ್ದಾರೆ. ಇನ್ನು ವಿಷ್ಣು ಕುಟುಂಬ ಮೈಸೂರಲ್ಲಿ ಸಾಹಸಸಿಂಹನ ಪುಣ್ಯಸ್ಮರಣೆಯನ್ನು ಕುಟುಂಬ ಸಮೇತರಾಗಿ ಆಚರಿಸುತ್ತಿದ್ದಾರೆ.