ಭರಾಟೆ
ರಾಜ್ಯದ ಸುಮಾರು 300 ಚಿತ್ರಮಂದಿರಗಳಲ್ಲಿ ‘ಭರಾಟೆ’ ಸದ್ದು ಕೇಳಿ ಬರುತ್ತಿದೆ. ಸುಮಾರು 75 ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಖಳನಟರ ಸಂಖ್ಯೆಯೇ 18 ದಾಟುತ್ತದೆ. ಆರು ಸಾಹಸ ಸನ್ನಿವೇಶಗಳು ಮತ್ತು ಐದು ಹಾಡುಗಳ ಜೊತೆಗೆ ಭಾರತೀಯ ಪರಂಪರೆಯ ಆಯುರ್ವೇದ ಔಷಧ ಬಗ್ಗೆ ‘ಭರಾಟೆ’ ಗಮನ ಹರಿಸಿದೆ.
ಶ್ರೀಮುರಳಿ ‘ಮಫ್ತಿ’ ನಂತರ ಈ ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀಲೀಲಾ ಮುರಳಿ ಜೊತೆ ನಾಯಕಿಯಾಗಿ ನಟಿಸಿರುವ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಭರಾಟೆ’ ಚಿತ್ರದ ಮೂಲಕ ಸಾಯಿಕುಮಾರ್,ಅಯ್ಯಪ್ಪ ಶರ್ಮಾ ಹಾಗೂ ರವಿಶಂಕರ್ ಮೂವರೂ ಸಹೋದರರು ಒಟ್ಟಿಗೆ ಅಭಿನಯಿಸಿದ್ದಾರೆ. ಚಿತ್ರವನ್ನು ಬಹಾದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.
ಜಗದ್ಗುರು ಮೂವೀಸ್ ಬ್ಯಾನರ್ ಅಡಿಯಲ್ಲಿ ಸುಪ್ರೀತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರೀಶ್ ಆರ್.ಗೌಡ ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಕೆ.ರವಿವರ್ಮ,ಗಣೇಶ್, ವಿಜಯ್ ಸಾಹಸ ನಿರ್ದೇಶನವಿದೆ. ಎ. ಹರ್ಷ, ಇಮ್ರಾನ್ ಸರ್ದಾರಿಯಾ, ಮೋಹನ್, ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕೆ ಇದ್ದು ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಒದಗಿಸಿದ್ದಾರೆ. ರಂಗಾಯಣ ರಘು, ತಾರಾ, ಶೋಭರಾಜ್,ಗಿರಿ, ರಾಜು ತಾಳಿಕೋಟಿ, ಸಾಧು ಕೋಕಿಲ, ಕುರಿ ಪ್ರತಾಪ್, ಜೈಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ಬಲ ರಾಜವಾಡಿ, ಉಗ್ರಂ ಮಂಜು, ಸಿಲ್ಲಿ ಲಲ್ಲಿ ಆನಂದ್ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.
ಗಂಟುಮೂಟೆ
ವಿದೇಶದಲ್ಲಿ ಸಾಫ್ಟ್‌ವೇರ್ ಉದ್ಯೋಗ ಮಾಡಿಕೊಂಡು ಭಾರತಕ್ಕೆ ಬಂದು ಚಿತ್ರ ನಿರ್ದೇಶನ ಮಾಡಿರುವ ರೂಪಾರಾವ್ ಮೊದಲ ಬಾರಿಗೆ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಹದಿ ಹರೆಯದ ವಯಸ್ಸಿನಲ್ಲಿ ಆಗುವ ಮನಸಿನ ತಳಮಳ, ಇದು ಪ್ರೀತಿಯೋ, ಆಕರ್ಷಣೆಯೋ ಎಂಬ ಜಿಜ್ಞಾಸೆಯ ವಯಸ್ಸು ಸೇರಿದಂತೆ ಇನ್ನಿತರ ಅಂಶಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ತೇಜು ಬೆಳವಾಡಿ ಮತ್ತು ನಿಶ್ಚಿತ್ ಕರೋಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೆಯುಕ್ತಿ ಸ್ಟುಡಿಯೋಸ್ ಅಡಿ ಸಹದೇವ್ ಕೆಳವಾಡಿ ಚಿತ್ರವನ್ನು ನಿರ್ಮಿಸಿದ್ದಾರೆ. ರೂಪಾರಾವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ಸಹದೇವ್ ಕೆಳವಾಡಿ ಛಾಯಾಗ್ರಹಣ, ಅಪರಾಜಿತ್ ಸಂಗೀತ, ಪ್ರದೀಪ್ ನಾಯಕ್ ಸಂಕಲನ ಇದೆ. ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.
ಸವರ್ಣದೀರ್ಘಸಂಧಿ
ವೀರು ಟಾಕೀಸ್ ಮತ್ತು ಶೈಲಾಕ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ ಹಾಗೂ ವೀರೇಂದ್ರ ಶೆಟ್ಟಿ ನಿರ್ಮಾಣ ಮಾಡಿರುವ 'ಸವರ್ಣದೀರ್ಘಸಂಧಿ' ಸಿನಿಮಾ ಇಂದು ಬಿಡುಗಡೆಯಾಗಿದೆ.
ವೀರೇಂದ್ರ ಶೆಟ್ಟಿ ತುಳು ಭಾಷೆಯ ‘ಚಾಲಿ ಪೋಲಿಲು’ ಚಿತ್ರದಿಂದ ಜನಪ್ರಿಯತೆ ಪಡೆದು ಇದೀಗ ಮೊದಲ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಮುಂಗಾರು ಮಳೆ' ಖ್ಯಾತಿಯ ಮನೋಮೂರ್ತಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ, ದೇವಿಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ವೀರೇಂದ್ರ ಶೆಟ್ಟಿ, ಕೃಷ್ಣಾ, ಪದ್ಮಜರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ, ವಿವೇಕ್ ಪಂಜಾಬಿ, ಅವಿನಾಶ್ ರಾಯ್, ರವಿ ಮಂಡ್ಯ, ಪದ್ಮಜಾ ರಾವ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.