ಪಡ್ಡೆ ಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ನಟ ಶ್ರೇಯಸ್ ಮಂಜು. ನಿರ್ದೇಶಕ ನಂದ ಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ಕಾಂಬಿನೇಶನ್ನಲ್ಲಿ ಕೆಲ ದಿನಗಳ ಹಿಂದೆ, ರಾಣ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು. ಇದೀಗ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಶ್ರೇಯಸ್ ನಾಯಕನಾಗಿ ನಟಿಸಲಿರುವ ನೂತನ ಸಿನಿಮಾ ರಾಣ ಸೆಟ್ಟೇರಿದ್ದು, ಸರಳವಾಗಿ ಮುಹೂರ್ತ ಕಾರ್ಯ ನೆರವೇರಿಸಲಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುಜ್ಜಲ್ ಅವರ ತಾಯಿ ಕ್ಲಾಪ್ ಮಾಡಿ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಇನ್ನೇನು ಶೀಘ್ರದಲ್ಲಿಯೇ ಸಿನಿಮಾ ಕೆಲಸಗಳನ್ನು ಶುರು ಮಾಡಲಿದ್ದಾರಂತೆ ನಿರ್ದೇಶಕ ನಂದಕಿಶೋರ್. ನಂದಕಿಶೋರ್ ಮತ್ತು ನಿರ್ಮಾಪಕ ಗುಜ್ಜಲ್ ಮೊದಲ ಬಾರಿ ಈ ಸಿನಿಮಾ ಮೂಲಕ ಒಂದಾಗಿದ್ದು, ಮಾಸ್ ಆ್ಯಕ್ಷನ್ ಶೈಲಿಯ ಸಿನಿಮಾ ಇದಾಗಿರಲಿದೆ ಎಂಬುದು ತಂಡದ ಮಾತು.
ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾಹಿತಿ ನೀಡುವ ನಟ ಶ್ರೇಯಸ್ ಮಂಜು, ‘ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ರಾಣದಲ್ಲಿ ತುಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಪಡ್ಡೆಹುಲಿಯಲ್ಲಿ ಕಾಮಿಡಿ ಫನ್ ಇತ್ತು. ವಿಷ್ಣು ಪ್ರಿಯ ಚಿತ್ರದಲ್ಲಿ ಸೌಮ್ಯ ಸ್ವಭಾವದ ಪಾತ್ರವಿದೆ. ಇದೀಗ ರಾಣದಲ್ಲಿ ಸಂಪೂರ್ಣ ಚೇಂಜ್ ಓವರ್ ಇದೆ. ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದೇನೆ. ಆ್ಯಕ್ಷನ್ಗೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದೇನೆ ಎನ್ನುತ್ತಾರೆ.
ಪುತ್ರನ ಚಿತ್ರದ ಬಗ್ಗೆ ನಿರ್ಮಾಪಕ ಕೆ. ಮಂಜು ಸಹ ಪ್ರತಿಕ್ರಿಯಿಸಿದ್ದಾರೆ. ಒಳ್ಳೆ ಕಥೆ ಸಿಕ್ಕಿದೆ. ಗುಜ್ಜರ್ ಅವರು ಮೊದಲಿಂದಲೂ ನನಗೆ ಸ್ನೇಹಿತರು. ಯಾವುದಾದರೂ ಸಿನಿಮಾ ಇದ್ದರೆ ನೀಡಿ ಎಂದಿದ್ದರು. ಅದರಂತೆ ನಂದಕಿಶೋರ್ ಮತ್ತು ಶ್ರೇಯಸ್ ಕಾಂಬಿನೇಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಗುಜ್ಜರ್ ಅವರಿಗೆ ಕೃಷ್ಣನಂತೆ ಅವರೊಂದಿಗೆ ಬೆನ್ನಿಗೆ ನಿಲ್ಲುತ್ತೇನೆ ಎಂದರು.
ಈ ಚಿತ್ರದಲ್ಲಿ ಶ್ರೇಯಸ್ಗೆ ಇಬ್ಬರು ನಾಯಕಿಯರು. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಹಳ ಮುದ್ದಾದ ಪಾತ್ರವನ್ನು ನೀಡಿದ್ದಾರೆ. ನಂದಕಿಶೋರ್ ಅವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೀಗ ಈ ಸಿನಿಮಾ ಮೂಲಕ ಈಡೇರಿದೆ ಎಂದು ನಟಿ ರೀಷ್ಮಾ ನಾಣಯ್ಯ ಹೇಳಿಕೊಂಡಿದ್ದಾರೆ.
ಪೊಗರು ಬಳಿಕ ನಂದಕಿಶೋರ್ ಜತೆಗೆ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನ ಇಲ್ಲಿಯೂ ಮುಂದುವರಿಯುತ್ತಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ.
ಇದನ್ನೂ ಓದಿ: ದುಬಾರಿ ಚಿತ್ರದಿಂದ ಹೊರಬಂದು ರಾಣ ಚಿತ್ರಕ್ಕೆ ಸಾರಥಿಯಾದ ನಿರ್ದೇಶಕ ನಂದ ಕಿಶೋರ್!
ಕೊನೆಯದಾಗಿ ಮಾತಿಗಿಳಿದ ನಂದಕಿಶೋರ್, ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತದೆ. ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ನಡೆಯಲಿದೆ. ಒಟ್ಟಾರೆ 40-45 ದಿನದ ಶೂಟಿಂಗ್ ಪ್ಲಾನ್ ಹಾಕಿದ್ದೇವೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಡಿ ಬಿಲ್ಡರ್ ರಾಘವೇಂದ್ರ ಅವರನ್ನು ವಿಲನ್ ಪಾತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ಇನ್ನುಳಿದ ಪಾತ್ರ ವರ್ಗದ ಮಾಹಿತಿ ಶೀಘ್ರದಲ್ಲಿ ತಿಳಿಸಲಿದ್ದೇವೆ ಎಂದರು.
ಶೇಖರ್ ಚಂದ್ರ ಛಾಯಾಗ್ರಹಣ, ಸಂಗೀತ ಚಂದನ್ ಶೆಟ್ಟಿ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ರವಿ ವರ್ಮಾ ಸಾಹಸ ನಿರ್ದೇಶನ ಮಾಡಲಿದ್ದಾರೆ. ಗುಜ್ಜಲ್ ಪುರುಷೋತ್ತಮ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.