ಕಳೆದ ತಿಂಗಳು ಹೈದರಾಬಾದ್ನಲ್ಲಿ ‘ಸೈ ರಾ ನರಸಿಂಹ ರೆಡ್ಡಿ‘ ಸಿನಿಮಾಗಾಗಿ ಹಾಕಿದ್ದ ಸೆಟ್ ಬೆಂಕಿಗೆ ಆಹುತಿಯಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಇದೀಗ ಚಿತ್ರತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಈ ಚಿತ್ರದ ನಟನೊಬ್ಬ ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ.
ಚಿತ್ರದಲ್ಲಿ ಅಭಿನಯಿಸಲು ರಷ್ಯಾದಿಂದ ಬಂದಿದ್ದ 37 ವರ್ಷದ ಅಲೆಕ್ಸಾಂಡರ್ ಎಂಬುವವರು ತೀವ್ರ ಬಿಸಿಲಿನ ತಾಪದಿಂದ ಅಸುನೀಗಿದ್ದಾರೆ. ವರದಿಗಳ ಪ್ರಕಾರ 2 ದಿನಗಳ ಹಿಂದೆ ಹೈದರಾಬಾದ್ ಗಚ್ಚಿಬೌಲಿಯ DLF ಬಿಲ್ಡಿಂಗ್ ಬಳಿ ಅಲೆಕ್ಸಾಂಡರ್ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದಾಗ ಆತ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಆತನ ಬಳಿ ಇದ್ದ ಕ್ಯಾಮರಾ ಪರಿಶೀಲಿಸಿದಾಗ ‘ಸೈ ರಾ‘ ಚಿತ್ರದ ಫೋಟೋಗಳು ಕಂಡುಬಂದಿವೆ. ಚಿತ್ರತಂಡವನ್ನು ಸಂಪರ್ಕಿಸಿದಾಗಲೇ ಆತ ಸಿನಿಮಾದಲ್ಲಿ ನಟಿಸಲು ಬಂದಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಅಲೆಗ್ಸಾಂಡರ್ ಬ್ರಿಟಿಷ್ ವ್ಯಕ್ತಿಯಾಗಿ ನಟಿಸುತ್ತಿದ್ದರು ಎನ್ನಲಾಗಿದೆ.
ಚಿತ್ರದ ಏಜೆಂಟ್ ಒಬ್ಬರು ಒಮ್ಮೆ ಗೋವಾದಲ್ಲಿ ಅಲೆಗ್ಸಾಂಡರನ್ನು ಭೇಟಿಯಾದಾಗ ಆತನಿಗೆ ಫೋಟೋಗ್ರಫಿ ಹಾಗೂ ನಟನೆಯಲ್ಲಿ ಆಸಕ್ತಿಯಿದೆ ಎಂದು ತಿಳಿದುಬಂದಿದೆ. ಅದೇ ಸಮಯಕ್ಕೆ ಚಿತ್ರಕ್ಕೆ ಬ್ರಿಟಿಷ್ ವ್ಯಕ್ತಿ ಪಾತ್ರ ಮಾಡುವ ನಟ ಬೇಕಿದ್ದರಿಂದ ಆತನನ್ನು ಹೈದರಾಬಾದ್ಗೆ ಕರೆತರಲಾಗಿತ್ತು. ತೆಲಂಗಾಣ, ಆಂಧ್ರದಲ್ಲಿ ನಡೆದ ಶೂಟಿಂಗ್ನಲ್ಲಿ ಆತ ಭಾಗಿಯಾಗಿದ್ದ ಎನ್ನಲಾಗಿದೆ.
1987 ರ ಸಿಪಾಯಿ ದಂಗೆ ಮುನ್ನವೇ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದ ಸ್ವತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಚರಿತ್ರೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿರುವ ‘ಸೈ ರಾ ನರಸಿಂಹ ರೆಡ್ಡಿ‘ ಸಿನಿಮಾವನ್ನು ರಾಮ್ಚರಣ್ ತೇಜ್ ನಿರ್ಮಿಸುತ್ತಿದ್ದು ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.