ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾದ 'ಸುವರ್ಣ ಸುಂದರಿ' ಚಿತ್ರ ಮಲ್ಟಿಪ್ಲೆಕ್ಸ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕೂಡಾ ಹೆಚ್ಚುತ್ತಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.
'ಸುವರ್ಣ ಸುಂದರಿ' ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿತು. ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ಹಿರಿಯ ನಟಿ ಜಯಪ್ರದ ಈ ಸಿನಿಮಾ ಮೂಲಕ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ನಟನೆಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಥಿಯೇಟರ್ಗೆ ಜನರನ್ನು ಸೆಳೆಯುವಲ್ಲಿ ಸುವರ್ಣ ಸುಂದರಿ ಯಶಸ್ವಿಯಾಗಿದ್ದಾಳೆ. ಇನ್ನು ಈ ಚಿತ್ರವನ್ನು ಆಂಧ್ರ ಮೂಲದ ಎಂ.ಎಸ್.ಎನ್ ಸೂರ್ಯ ನಿರ್ದೇಶಿಸಿದ್ದು, ಮೊದಲ ಚಿತ್ರದಲ್ಲೇ ಯಶಸ್ಸನ್ನು ಕಂಡಿದ್ದಾರೆ.
ಆಂಧ್ರ ಮೂಲದ ಎಂ.ಎಲ್. ಲಕ್ಷ್ಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರದ ಸಕ್ಸಸ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಮೋಷನ್ ಇನ್ನೂ ಚೆನ್ನಾಗಿ ಆಗಿದ್ದರೆ ನಮ್ಮ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ತಿತ್ತು. ಆದ್ರೆ ಚಿತ್ರವನ್ನು ಪ್ರಮೋಷನ್ ಮಾಡುವುದಾಗಿ ಕೆಲವರು ಹಣ ಪಡೆದು ವಂಚಿಸಿದ್ದಾರೆ ಎಂದು ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ವಂಚಕರ ವಿರುದ್ಧ ಫಿಲ್ಮ್ ಚೇಂಬರ್ ಹಾಗೂ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಲಕ್ಷ್ಮಿ ಹಾಗೂ ನಿರ್ದೇಶಕ ಸೂರ್ಯ ಇದೇ ವೇಳೆ ತಿಳಿಸಿದರು.