ಬೆಂಗಳೂರು: ಕೊರೊನಾ ಇಡೀ ದೇಶದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿನಿಮಾ ರಂಗದ ನಟ-ನಟಿಯರ ಮೇಲೂ ಪ್ರಭಾವ ಬೀರಿದೆ. ಇನ್ನು ಅನೇಕರು ಲಾಕ್ಡೌನ್ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬದುಕು ನಡೆಸುವುದು ನಿಜಕ್ಕೂ ಅಷ್ಟೊಂದು ಕಷ್ಟವೇ ಎಂದು ಪೋಷಕ ನಟ ಗಣೇಶ್ ರಾವ್ ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ನಟ ಸುಶೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿಗೆ ಲಾಕ್ಡೌನ್ ಸಂದರ್ಭದಲ್ಲಿ ಆದ ಆರ್ಥಿಕ ಸಂಕಷ್ಟ ಕಾರಣ ಎಂಬ ಮಾತು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಮಾತನಾಡಿದ ಗಣೇಶ್ ಅವರು, ಕೊರೊನಾದಿಂದ ನಮಗೆ ಪೂರಕವಾದ ಕೆಲಸ ಇಲ್ಲ. ಕೆಲಸ ಇಲ್ಲ ಅಂದ್ರೆ ಸಂಪಾದನೆ ಇಲ್ಲ. ಸಂಪಾದನೆಯೇ ಇಲ್ಲ ಅಂದ್ರೆ ನಮ್ಮ ದೈನಂದಿನ ಚಟುವಟಿಕೆಗಳ ಕಥೆ ಏನು ಎಂಬ ಚಿಂತೆ ಇರುತ್ತದೆ. ಆದರೆ ಬದುಕು ನಿಜಕ್ಕೂ ಕಷ್ಟ ಇಲ್ಲ. ಮೃಷ್ಟಾನ್ನ ಭೋಜನ ತಿನ್ನುತಿದ್ದರೆ ಭೋಜನ ತಿನ್ನೋಣ, ಭೋಜನ ತಿಂದು ಜೀವನ ನಡೆಸ್ತಿದ್ದವರು ಗಂಜಿ, ಅಂಬಲಿ ಕುಡಿದು ಬದುಕೋಣ ಎಂಬ ಮಾದರಿ ನುಡಿಗಳನ್ನಾಡಿದ್ದಾರೆ.
'ನಾವು ಎರಡು ಕಣ್ಣುಗಳಿಂದ ಪ್ರಪಂಚದ ನೋಡುತ್ತಿದ್ದೇವೆ. ಆದರೆ ಕಣ್ಣು ಇಲ್ಲದವರು ನಮಗಿಂತ ಸುಂದರವಾದ ಪ್ರಪಂಚ ನೋಡಿಕೊಂಡು ಬದುಕುತ್ತಿದ್ದಾರೆ. ನಾವು ಎರಡು ಕೈ ಇದ್ದರೂ ಹೇಗಪ್ಪಾ ಜೀವನ ಎನ್ನುತ್ತಿದ್ದೇವೆ. ಆದರೆ ಕೈ-ಕಾಲು ಇಲ್ಲದವರು ಜೀವನ ನಡೆಸುತ್ತಿಲ್ಲವೇ? ಆದ್ದರಿಂದ ನಾವು ಪಾಸಿಟಿವ್ ಆಗಿ ಯೋಚನೆ ಮಾಡೊಣ. ಜೀವ ಇದ್ದರೆ ಜೀವನ' ಎಂದು ಕಿವಿಮಾತು ಹೇಳಿದ್ದಾರೆ.