ಹಿರಿಯ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಸುನಿಲ್ ರಾವ್ ಬಾಲನಟನಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಮುಂದೆ ನಾಯಕನಾಗಿ ಕೂಡಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ನಡುವೆ ಕೆಲವು ವರ್ಷಗಳ ಕಾಲ ಸುನಿಲ್ ರಾವ್ ಆ್ಯಕ್ಟಿಂಗ್ನಿಂದ ದೂರವಿದ್ದರು. ಇದೀಗ ಸುನಿಲ್ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ.
'ತುರ್ತು ನಿರ್ಗಮನ' ಚಿತ್ರದಿಂದ ಸುನಿಲ್ ರಾವ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಸುನಿಲ್ ಮತ್ತೆ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುಮಾರ್ ಅಂಡ್ ಕುಮಾರ್ ಫಿಲ್ಮ್ಸ್ ಬ್ಯಾನರ್, ಶೈಲಜಾ ಪಿಕ್ಚರ್ಸ್ ಬ್ಯಾನರ್ ಅಡಿ ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸುತ್ತಿರುವ 'ತುರ್ತು ನಿರ್ಗಮನ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯಕ್ಕೆ ಚಿತ್ರತಂಡ ಕೇರಳದ ಕೊಚ್ಚಿನ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ವಿಶ್ಯುಯಲ್ ಎಫೆಕ್ಟ್ಗಳು ಕೊಚ್ಚಿನ್ ಸೂತ್ರ ಸ್ಟುಡಿಯೋದಲ್ಲಿ ಹಾಗೂ ಸೌಂಡ್ ಡಿಸೈನ್ ಮುಂಬೈನ ಔರಲ್ ಮೇಹಮ್ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಇದೊಂದು ಫ್ಯಾಂಟಸಿ ಹಾಗೂ ಕಾಲ್ಪನಿಕ ಕಥಾಹಂದರ ಇರುವ ಚಿತ್ರವಾಗಿದ್ದು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಹೇಮಂತ್ ಕುಮಾರ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ, ಅಜಿತ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಸುನಿಲ್ ರಾವ್ ಜೊತೆ ರಾಜ್ ಬಿ. ಶೆಟ್ಟಿ, ಸಂಯುಕ್ತ ಹೆಗ್ಡೆ ,ಅಚ್ಯುತ್ ಕುಮಾರ್, ಸುಧಾರಾಣಿ, ಹಿತ ಚಂದ್ರಶೇಖರ್, ಅಮೃತ ರಾಮ ಮೂರ್ತಿ, ನಾಗೇಂದ್ರ ಷಾ, ಅರುಣಾ ಬಾಲರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ.