ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆ ಕೊನೆಯ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದ್ದು ಮಂಗಳವಾರ ಸಿಬಿಐ ಜೊತೆ ಏಮ್ಸ್ ವೈದ್ಯಕೀಯ ಮಂಡಳಿ ಸಭೆ ನಡೆಸಲಿದೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಿಬಿಐ ಮೂಲಗಳ ಪ್ರಕಾರ, ಏಮ್ಸ್ ವಿಧಿವಿಜ್ಞಾನ ತಂಡವು ದಕ್ಷಿಣ ದೆಹಲಿಯ ಲೋಧಿ ರಸ್ತೆ ಬಳಿಯ ಕಚೇರಿಯಲ್ಲಿ ವಿಶೇಷ ತನಿಖಾ ದಳದ ಸದ್ಯರನ್ನು ಭೇಟಿಯಾಗಲಿದೆ. ಸಿಬಿಐನ ವಿಶೇಷ ತನಿಖಾ ದಳ ಹಾಗೂ ಸಿಎಫ್ಎಸ್ಎಲ್ ತಮ್ಮ ತನಿಖಾ ವರದಿಯನ್ನು ಏಮ್ಸ್ನೊಂದಿಗೆ ಹಂಚಿಕೊಳ್ಳಲಿದೆ. ಈ ವರದಿಯ ಅಧ್ಯಯನ ನಡೆಸಿ, ಸುಶಾಂತ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ.
ಆಗಸ್ಟ್ 6 ರಂದು ಸಿಬಿಐ ಸುಶಾಂತ್ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. ಮುಂಬೈ ಕೂಪರ್ ಆಸ್ಪತ್ರೆ ನೀಡಿ ಪೋಸ್ಟ್ ಮಾರ್ಟಂ ರಿಪೋರ್ಟ್ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಫೆಡರಲ್ ಏಜೆನ್ಸಿಗೆ ವರದಿ ಸಲ್ಲಿಸಲು ಏಮ್ಸ್ ವಿಧಿ ವಿಜ್ಞಾನ ತಂಡಕ್ಕೆ ಸಿಬಿಐ ತಂಡ ಸಹಾಯ ಮಾಡಿತ್ತು. ಡಾ. ಸುಧೀರ್ ಗುಪ್ತಾ ನೇತೃತ್ವದ ಏಮ್ಸ್ ವಿಧಿವಿಜ್ಞಾನ ತಂಡವು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಬಾಂದ್ರಾ ನಿವಾಸಕ್ಕೆ ತೆರಳಿ ವಿಚಾರಣೆಗೆ ಸಹಾಯವಾಗಲೆಂದು ಕೆಲವೊಂದು ಘಟನೆಗಳನ್ನು ಮರುಸೃಷ್ಠಿ ಮಾಡಿತ್ತು.
ಏಮ್ಸ್ ತಂಡಕ್ಕೆ ಸುಶಾಂತ್ ಸಹೋದರಿ ಮೀತು ಸಿಂಗ್, ಸುಶಾಂತ್ ಜೊತೆ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಸಿದ್ದಾರ್ಥ್ ಪಿಥಾನಿ, ಅಪಾರ್ಟ್ಮೆಂಟ್ ಸಿಬ್ಬಂದಿಗಳಾದ ದೀಪೇಶ್ ಸಾವಂತ್, ನೀರಜ್ ಸಿಂಗ್ ಹಾಗೂ ಕೇಶವ್ ಬಚ್ನೆ ವಿಚಾರಣೆಗೆ ಸಹಕರಿಸಿದ್ದರು.
ಪ್ರಕರಣದ ತನಿಖೆ ವಹಿಸಿಕೊಂಡಾಗಿನಿಂದ ಮುಂಬೈನಲ್ಲಿ ಸಿಬಿಐ ತಂಡ ಸುಮಾರು ಒಂದು ತಿಂಗಳ ಕಾಲ ನೆಲೆಸಿತ್ತು. ಈ ವೇಳೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ, ಸಹೋದರ ಶೌಯಿಕ್, ತಂದೆ ಇಂದ್ರಜಿತ್, ಮ್ಯಾನೇಜರ್ ಸ್ಯಾಮ್ಯುಯಲ್ ಮಿರಾಂಡ, ಮಾಜಿ ಸೆಲಬ್ರಿಟಿ ಮ್ಯಾನೇಜರ್ ಶ್ರುತಿ ಮೋದಿ ಸೇರಿದಂತೆ ಇನ್ನಿತರರನ್ನು ವಿಚಾರಣೆ ನಡೆಸಿತ್ತು. ಸುಶಾಂತ್ ಅನೇಕ ಬಾರಿ ಭೇಟಿ ನೀಡಿದ್ದ ವಾಟರ್ ಸ್ಟೋನ್ ರೆಸಾರ್ಟ್ಗೆ ತೆರಳಿ ಕೂಡಾ ಸಿಬಿಐ ವಿಚಾರಣೆ ನಡೆಸಿತ್ತು.
ಸಿಬಿಐ ಜೊತೆಗೆ ಜಾರಿ ನಿರ್ದೇಶನನಾಲಯ ಹಾಗೂ ಎನ್ಸಿಬಿ ಕೂಡಾ ಪ್ರಕರಣದ ವಿಚಾರಣೆ ನಡೆಸುತ್ತಿವೆ. ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಶೋಯಿಕ್, ಮಿರಾಂಡ, ಸಾವಂತ್ ಹಾಗೂ ಇನ್ನಿತರರನ್ನು ಎನ್ಸಿಬಿ ಬಂಧಿಸಿದೆ.