ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ತಮ್ಮ ಜೀವನದ ದೊಡ್ಡ ಕನಸಿಗೆ ಚಾಲನೆ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಎಲ್ಲವೂ ಸರಿ ಆಗಿದ್ದರೆ ಮಾರ್ಚ್ 19ರಂದು ಮಾಧ್ಯಮದ ಮುಂದೆ ಬಂದು ತಮ್ಮ ಕನಸನ್ನು ಅನಾವರಣ ಮಾಡಿಕೊಳ್ಳಬೇಕು ಎಂದು ರಾಜೇಶ್ ಕೃಷ್ಣನ್ ತೀರ್ಮಾನಿಸಿದ್ದರು.
ಆದರೆ ಆ ಕನಸು ಏನು ಎಂಬುದು ಈಗ ತಿಳಿದಿದೆ. ಅದೇ ‘ಸಿರಿ ಕನ್ನಡ ಸಂಗೀತ ವಾಹಿನಿ’. ಈ ಸಂಪೂರ್ಣ ಸಂಗೀತ ವಾಹಿನಿಯ ಮುಖ್ಯಸ್ಥರಾಗಿ ರಾಜೇಶ್ ಕೃಷ್ಣನ್ ನೇಮಕವಾಗಿ ತಂಡವೊಂದನ್ನು ಕಟ್ಟಿದ್ದಾರೆ. ಹಲವಾರು ವರ್ಷಗಳಿಂದ ಹೊಸ ಯೋಜನೆಯನ್ನು ಒಟ್ಟುಗೂಡಿಸುತ್ತಾ ಬಂದಿದ್ದಾರೆ.
‘ಸಿರಿ ಕನ್ನಡ ಸಂಗೀತ ವಾಹಿನಿ’ ಸಂಗೀತಾಭಿಮಾನಿಗಳಿಗೆ ಎಲ್ಲಾ ಪ್ರಕಾರದ ಸಂಗೀತದ ರಸದೌತಣದ ಮೂಲಗಳನ್ನೊಳಗೊಂಡಿರುತ್ತದೆ. ಈ ಕನ್ನಡ ಸಂಗೀತ ವಾಹಿನಿ ಲೋಕಾರ್ಪಣೆ ಆಗುವುದಕ್ಕೆ ಕೆಲವೇ ದಿನಗಳು ಕಾಯಬೇಕಿದೆ.
ಈ ವರ್ಷದ ಯುಗಾದಿಯಂದು ಈ ‘ಸಿರಿ ಸಂಗೀತ ವಾಹಿನಿ’ ಉದ್ಘಾಟನೆ ಆಗಬೇಕು ಎಂಬ ಯೋಚನೆ ಇತ್ತು. ಆದರೆ ಕೊರೊನಾ ವೈರಸ್ ಕಾರಣ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ವಲ್ಪ ಮುಂದೆ ಹೋಗಿದೆ. ರಾಜೇಶ್ ಕೃಷ್ಣ ಚೊಚ್ಚಲ ಪ್ರಯತ್ನಕ್ಕೆ ಮೈಸೂರಿನವರಾದ ಜಿ ರವಿ ಹಾಗೂ ಎಸ್ ಪಿ ರಾಜ ಬಲವಾಗಿ ಹಿಂದೆ ನಿಂತಿದ್ದಾರೆ.
ಸಂಪೂರ್ಣ ಸಂಗೀತ ವಾಹಿನಿ ಆರಂಭವಾಗುತ್ತಿರುವುದು ಕರ್ನಾಟಕದಲ್ಲಿ ಇದೆ ಮೊದಲು. ರಾಜೇಶ್ ಕೃಷ್ಣನ್ ಸಧ್ಯ ಜೀ ಟಿವಿಯ ‘ಸರಿಗಮಪ’ ತೀರ್ಪುಗಾರರಾಗಿದ್ದಾರೆ.