ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯಕರಾಗಿ ಎಲ್ಲಾ ಗಾಯಕರಂತೆ ಮೈಕ್ ಮುಂದೆ ನಿಂತು ರೆಕಾರ್ಡಿಂಗ್‌ನಲ್ಲಿ ಕಾರ್ಯನ್ಮುಕರಾಗಿದ್ದರೆ ಅವರಿಗೆ ಇಷ್ಟೊಂದು ಜನಪ್ರಿಯತೆ ಸಿಗುತ್ತಿರಲಿಲ್ಲ.
ಗಾಯಕನಾಗಿ, ನಟನಾಗಿ, ನಿರ್ಮಾಪಕನಾಗಿ, ಕಿರುತೆರೆ ನಟನಾಗಿ ಹಾಗೂ ಡಬ್ಬಿಂಗ್ ಆರ್ಟಿಸ್ಟಾಗಿ ಮಿಂಚಿದ್ದರು. ಕಿರುತೆರೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನ ತಮ್ಮ ನಿರೂಪಣೆಯಲ್ಲಿ ನಡೆಸಿಕೊಂಡು ಬರುತ್ತಿದ್ದರು.
ಕರ್ನಾಟಕದಾದ್ಯಂತ ಎಸ್‍ಪಿಬಿಯನ್ನು ಮನೆಮಾತಾಗಿಸಿದ್ದೇ ಇದೇ ಕಾರ್ಯಕ್ರಮ. ಕಳಾಹೀನವಾಗಿ ತನ್ನ ನೈಜತೆ ಕಳೆದುಕೊಳ್ಳುತ್ತಿರುವ ರಿಯಾಲಿಟ್ ಶೋಗಳಿಗೆ ಮಾದರಿ ನಿರೂಪಕನಾಗಿ, ನೈಜ ಸಂಸ್ಕೃತಿಯ ರಾಯಬಾರಿಯಾಗಿ, ಸೌಜನ್ಯದ ಮಾತುಗಳಿಗೆ ಹಿರಿ-ಕಿರಿಯರೆಲ್ಲಾ ಎಸ್‍ಪಿಬಿಯ ನಿರೂಪಣೆಗೆ ಮನಸೋತ್ತಿದ್ದರು.
ನಿರೂಪಣೆಯ ಶೈಲಿಗೆ ನೈಜ ಸಂಸ್ಕೃತಿಯ ರಾಯಬಾರಿ ಎಂದು ಬಿರುದು ಕೊಟ್ಟರೆ ತಪ್ಪಾಗಲಾರದು. ಇದು ಇವರ ವ್ಯಕ್ತಿತ್ವಕ್ಕೆ ತಕ್ಕುದಾದ ಅನ್ವರ್ಥನಾಮ ಆಗಬಲ್ಲುದು. 50 ವರ್ಷಗಳ ಎಸ್‍ಪಿಬಿಯ ಸುದೀರ್ಘ ಸಂಗೀತ-ಗಾಯನದ ಪಯಣ ಅಮೋಘ, ಅರ್ಥಪೂರ್ಣ, ವಿನಯ-ವಿಧೇಯತೆಯಿಂದ ಕೂಡಿದೆ. ಎಸ್‍ಪಿಬಿ ಅವರು ಬಿಟ್ಟು ಹೋದ ಗಾನಗಂಗೆ ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಕಾವೇರಿ ಇರುವವರೆಗೂ ಹರಿಯುತ್ತಲೇ ಇರುತ್ತದೆ ಚಿರಂತನ ಶಾಶ್ವತವಾಗಿ.