ಎಷ್ಟೋ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಲು ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಒಂದೇ ಒಂದು ಅವಕಾಶ ದೊರೆತರೆ ಸಾಕು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಸ್ಯಾಂಡಲ್ವುಡ್ನಲ್ಲಿ ಮಿಂಚೋಣ ಎಂಬ ಆಸೆ ಹೊತ್ತು ಚಿತ್ರರಂಗಕ್ಕೆ ಬರುವ ಎಷ್ಟೋ ಮಂದಿ ಇದ್ದಾರೆ.
ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಉದಯೋನ್ಮುಕ ನಟ ಅಭಿಲಾಷ್ ನಟಿಸಿರುವ 'ಸರ್ವಂ ಪ್ರೇಮಂ' ಸಿನಿಮಾ ನಿನ್ನೆ ಸೆಟ್ಟೇರಿದೆ. ಅಭಿಲಾಷ್ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದರೂ ಅವರು ಬ್ರೇಕ್ಗಾಗಿ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಶಿವು ಕೋಲಾರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆಯೇ ಈ ಚಿತ್ರ ಸೆಟ್ಟೇರಿತ್ತು. ಆಗ ಈ ಚಿತ್ರಕ್ಕೆ ನಾಯಕನಾಗಿ ನವ ನಟ ಆನಂದ್ ಆಯ್ಕೆಯಾಗಿದ್ದರು. ಕಾರಣಾಂತರಗಳಿಂದ ಚಿತ್ರದ ನಾಯಕ ಬದಲಾಗಿದ್ದು ಇದೀಗ ನಿರ್ದೇಶಕ ಶಿವು ಕೋಲಾರ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ನೀಡಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ 'ಸರ್ವಂ ಪ್ರೇಮ' ಎಂಬ ಸಿನಿಮಾ ಪಕ್ಕಾ ಲವ್ ಸ್ಟೋರಿಯಾಗಿದ್ದು ಸಿನಿರಸಿಕರಿಗೆ ಬೇಕಾದ ಎಲ್ಲಾ ಎಲಿಮೆಂಟ್ಗಳು ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ನಾಯಕ ಇಂಜಿನಿಯರ್ ಆಗಿದ್ದು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾನೆ. ಇಂತ ಪ್ರೇಯಮಯಿ ಅನಾಥಾಶ್ರಮದ ಶಿಕ್ಷಕಿಯನ್ನು ಪ್ರೀತಿಸುತ್ತಾನೆ. ಮುಂದೆ ಅನೇಕ ತಿರುವುಗಳು ಇದ್ದು ಚಿತ್ರ ಬಹಳ ಕುತೂಹಲಭರಿತವಾಗಿದೆ. ಲವ್, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎಂದು ಚಿತ್ರತಂಡ ಹೇಳಿದೆ. ಶೋಭರಾಜ್ ಶ್ರೀನಿವಾಸಪ್ರಭು, ನರೇಂದ್ರಬಾಬು, ಗಣೇಶ್ ರಾವ್, ಆನಂದ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಲೋಕಿ ಚಿತ್ರಕ್ಕೆ ಟ್ಯೂನ್ ಕಂಪೋಸ್ ಮಾಡಲಿದ್ದಾರೆ. ಮಲ್ಲಿಕಾರ್ಜುನ್ ಸಂಭಾಷಣೆ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದ್ದು, ಕೆಜಿಎಫ್ ಬಳ್ಳಾರಿ-ಹೊಸಪೇಟೆ, ಮಡಿಕೇರಿ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರವನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಯೋಗೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಮುಂದಿನ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.