ಕರಾವಳಿಯ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ಪ್ರಸಿದ್ಧ ಕಾದಂಬರಿ 'ವಜ್ರಗಳು' ಈಗ ಸಿನಿಮಾವಾಗುತ್ತಿದೆ. ಮುಸ್ಲಿಂ ಸಮಾಜಕ್ಕೆ ಪಿಡುಗೆಂದೇ ಭಾವಿಸಿರುವ ತ್ರಿವಳಿ ತಲಾಖ್ ಕುರಿತಾದ 'ವಜ್ರಗಳು' ಕಾದಂಬರಿಯನ್ನು ಯಥಾವತ್ತಾಗಿ 'ಸಾರಾವಜ್ರ' ಎಂಬ ಟೈಟಲ್ ಇಟ್ಟು ಸಿನಿಮಾ ಮಾಡಲಾಗುತ್ತಿದೆ.
ವಿಶೇಷ ಎಂದರೆ ಈ ಚಿತ್ರವನ್ನು ಕರಾವಳಿ ಹುಡುಗಿ ಆರ್ನಾ ಸಾದ್ಯಾ ನಿರ್ದೇಶನ ಮಾಡಿದ್ದು ಸದ್ಯಕ್ಕೆ ಚಿತ್ರದ ಶೂಟಿಂಗ್ ಮುಗಿದಿದೆ. ನಿನ್ನೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ. ಇನ್ನು ಚಿತ್ರದ ಕಥೆ 90 ದಶಕದ ಕಾಲಘಟ್ಟದಲ್ಲಿ ಶುರುವಾಗಿ ಪ್ರಸ್ತುತದವರೆಗೂ ಬಂದು ನಿಂತಿದೆ. ತಲಾಖ್ನಿಂದ ನೊಂದು ಬೆಂದಿರುವ ಮುಸ್ಲಿಂ ಹೆಣ್ಣು ಮಗಳ ಪಾತ್ರದಲ್ಲಿ ನಟಿ ಅನುಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಎಂದು ನಿರ್ದೇಶಕಿ ಆರ್ನಾ ಮಾಹಿತಿ ನೀಡಿದರು. ಅನುಪ್ರಭಾಕರ್ ರಘು ಮುಖರ್ಜಿ ಅವರನ್ನು ಮದುವೆಯಾಗಿ ಮಗು ಜನಿಸಿದ ನಂತರ ಮತ್ತೆ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ನನಗೆ ಈ ಸಿನಿಮಾ ಒಳ್ಳೆ ಕಂಬ್ಯಾಕ್ ಚಿತ್ರವಾಗಲಿದೆ ಎಂದು ಅನು ಭರವಸೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು, ಹಿರಿಯನಟ ರಮೇಶ್ ಭಟ್, ಬಿಗ್ಬಾಸ್ ಖ್ಯಾತಿಯ ರೆಹಮಾನ್, ಸುಧಾ ಬೆಳವಾಡಿ, ಸುಹಾನಾ ಸೈಯದ್, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಚಿತ್ರದ ಶೂಟಿಂಗ್ ಮುಗಿದಿದ್ದು ಮಂಗಳೂರು ಸುತ್ತಮುತ್ತ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ ಬಿಟ್ ಸಾಂಗ್ಗಳು ಸೇರಿದಂತೆ ಒಟ್ಟು 9 ಹಾಡುಗಳಿದ್ದು ವಿ. ಮನೋಹರ್ ಸಂಗೀತ ನೀಡಿದ್ದಾರೆ. ಇನ್ನು ನರೇಂದ್ರ ಬಾಬು ಸಾರಾ ಅಬೂಬಕ್ಕರ್ ಅವರ ಕಾದಂಬರಿಯನ್ನು ಚಿತ್ರಕಥೆ ರೂಪಕ್ಕೆ ತಂದಿದ್ದು ಕಾದಂಬರಿಯ ಯಾವುದೇ ಪಾತ್ರವನ್ನು ಬದಲಾಯಿಸದೆ, ಮೂಲಕಥೆಗೆ ಯಾವುದೇ ಚ್ಯುತಿ ಬಾರದಂತೆ ಚಿತ್ರ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದು ಯುಗಾದಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ದೇವೇಂದ್ರ ರೆಡ್ಡಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.