ಬಹುಶಃ ಕನ್ನಡ ಚಿತ್ರ ರಂಗದಲ್ಲಿ ಮೇ 13, 1970 ಅಂದರೆ ಇಂದಿಗೆ 50 ವರ್ಷಗಳ ಹಿಂದೆ ಬಿಡುಗಡೆ ಆದ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ ಯು ಆರ್ ಅನಂತಮೂರ್ತಿ ಅವರ ‘ಸಂಸ್ಕಾರ’ ಸೃಷ್ಟಿಸಿದ ವಿವಾದ ಇನ್ಯಾವ ಕನ್ನಡ ಸಿನಿಮಾ ಸಹ ಸೃಷ್ಟಿ ಮಾಡಿದ್ದಿಲ್ಲ.
ಬಂಡಾಯ ಮನಸಿನ ಬ್ರಾಹ್ಮಣ ಮಾಂಸ ಸಹ ಸೇವಿಸಿ ತನ್ನ ಜಾತಿಗೆ ಅಪಚಾರ ಮಾಡಿರುತ್ತಾನೆ. ಆತ ಕಾಲವಾದಾಗ ಅವನ ಸಂಸ್ಕಾರ ಮಾಡುವುದೇ ಫಜೀತಿಗೆ ಬರುತ್ತದೆ. ದೊಡ್ಡ ವಿವಾದವೇ ಆ ಗ್ರಾಮದಲ್ಲಿ ಆಗಿ ಬಿಡುತ್ತದೆ. ಇದಕ್ಕೆ ತೀರ್ಮಾನವನ್ನು ಪ್ರಾಣೇಶಾಚಾರ್ಯರು (ಡಾ ಗಿರೀಶ್ ಕಾರ್ನಾಡ್ ಪಾತ್ರ) ತೆಗೆದು ಕೊಳ್ಳುವುದು ಎಂದು ನಿಶ್ಚಯ ಆಗುತ್ತದೆ.
ಸಂಸ್ಕಾರ ಬುದ್ದಿ ಜೀವಿಗಳ ಹಾಗೂ ಕಲಾತ್ಮಕ ಚಿತ್ರಗಳ ಆರಾಧಕರ ಅತೀವ ನಿರೀಕ್ಷೆ ನಡುವೆ ಬಿಡುಗಡೆ ಆದ ಚಿತ್ರವದು. ಆಗ ತಾನೇ ಚಿತ್ರ ನಿರ್ದೇಶನಕ್ಕೆ ಹಾಗೂ ನಿರ್ಮಾಣಕ್ಕೆ ಕಾಲಿಟ್ಟ ಪಟ್ಟಾಭಿ ರಾಮರೆಡ್ಡಿ ಅವರಿಗೆ ಭಾರಿ ಸಂಕಷ್ಟ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿತ್ತು. ಕಾರಣ ಸೆನ್ಸಾರ್ ಮಂಡಳಿ ಹಾಕಿದ ಅಡ್ಡಗಾಲು. ಆಗಿನ್ನೂ ಸಿನಿಮಾಗಳು ಮದರಾಸಿನಲ್ಲೆ ಸೆನ್ಸಾರ್ ಆಗುತ್ತಿದ್ದವು. ಸೆನ್ಸಾರ್ ತಂಡ ಈ ಚಿತ್ರವನ್ನು ನಿರಾಕರಣೆ ಮಾಡಿತು. ಅದಕ್ಕೆ ಕಾರಣ ಬ್ರಾಹ್ಮಣರ ಭಾವನೆಯನ್ನು ಹಾಗೂ ಸಂಪ್ರದಾಯವನ್ನು ಪ್ರಚೋದಕವಾಗಿ ಕೆಣಕುವುದು.
ನಿರ್ಮಾಪಕ, ನಿರ್ದೇಶಕ ಸೆನ್ಸಾರ್ ಪಡೆಯಲು ದೆಹಲಿಗೆ ತಲುಪಿದರು. ದೆಹಲಿಯ 15 ಮಂದಿ ಸೆನ್ಸಾರ್ ಮಂಡಳಿ ತಂಡ ಮದರಾಸಿನ ಅಭಿಪ್ರಾಯವನ್ನು ಖಂಡಿಸಿತು. ಈ ಚಿತ್ರ ಸಂಸತ್ತಿನಲ್ಲೂ ಸಹ ಸುದ್ದಿ ಮಾಡಿತು. ಆಗಿನ ಕೇಂದ್ರ ಮಂತ್ರಿ ಐ ಕೆ ಗುಜ್ರಾಲ್ ನಿರ್ದೇಶಕರ ಅಹವಾಲನ್ನು ಮಂಡಿಸಿದರು. ದೆಹಲಿಯಲ್ಲಿ ಗೆದ್ದ ಮೇಲೆ ಈ ಸಿನಿಮಾಕ್ಕೆ ಅಲ್ಲಿಯೇ ಒಂದು ವಿಶೇಷ ಪ್ರದರ್ಶನ ಸಹ ಆಯಿತು. ಸಂಸ್ಕಾರ ಚಿತ್ರಕ್ಕೆ ಅನೇಕರು ಪಟ್ಟಾಭಿರಾಮ ರೆಡ್ಡಿ ಅವರನ್ನು ಶ್ಲಾಘಿಸಿದರು.
ಇನ್ನು ಪ್ರಮುಖ ದೃಶ್ಯವನ್ನು ಆಗಿನ ಶೃಂಗೇರಿ ಸ್ವಾಮಿಗಳ ಹತ್ತಿರ ಅನುಮತಿ ಪಡೆದು ಶಿವಮೊಗ್ಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪಟ್ಟಾಭಿರಾಮ ರೆಡ್ಡಿ ಜೊತೆ ನಿಂತಿತ್ತು. ಆದರೆ, ಮದರಾಸ್ ಸೆನ್ಸಾರ್ ಮಂಡಳಿಯಿಂದ ಹಲವಾರು ಟೀಕೆಗಳನ್ನು ಎದುರಿಸಬೇಕಾಯಿತು.
ಅಂದು ಸಿನಿಮಾ ವೀಕ್ಷಿಸಿದ ಎಸ್ ಆರ್ ಪುಟ್ಟಣ್ಣ ಕಣಗಾಲ್ ಈ ಸಂಸ್ಕಾರದಲ್ಲಿ ಯಾವುದೇ ವೈಶಿಷ್ಟ್ಯತೆ ಇಲ್ಲ ಎಂದಿದ್ದರು. ಹಿರಿಯ ನಟ ಉದಯಕುಮಾರ್ ಸಹ ಈ ಚಿತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಚಿತ್ರದ ಟೈಟಲ್ ಕಾರ್ಡ್ ಅಲ್ಲಿ ಶ್ರೀ ಶೃಂಗೇರಿ ಸ್ವಾಮಿಗಳಿಗೆ ಧನ್ಯವಾದ ಹೇಳಿದ್ದು ಕಂಡು ಅನೇಕರು ಬೇಸರ ಕೂಡ ಮಾಡಿಕೊಂಡಿದ್ದರು.
ಇಷ್ಟೆಲ್ಲ ವಿವಾದಗಳ ನಡುವೆಯೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಸಹ ಬಿಡುಗಡೆ ಆದ ಸಿನಿಮಾ ಸಂಸ್ಕಾರ. ಅಲ್ಲದೇ, ವಿದೇಶಗಳಲ್ಲಿ ಸಹ ವ್ಯಾಪಕವಾಗಿ ಪ್ರದರ್ಶನ ಕಂಡಿತು.
113 ನಿಮಿಷಗಳ ಸಂಸ್ಕಾರ 35 ಎಂ ಎಂ ಅಲ್ಲಿ ಚಿತ್ರೀಕರಣ ಆದ ಸಿನಿಮಾ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದ್ದು. ಈ ಚಿತ್ರಕ್ಕೆ ವಿದೇಶಿ ಛಾಯಾಗ್ರಾಹಕ ಟಾಮ್ ಕೋವನ್ ಕ್ಯಾಮರಾ ಹಿಡಿದಿದ್ದರು. ರಾಜೀವ್ ತಾರನಾಥ್ ಸಂಗೀತ, ಸ್ಟಿವನ್ ಸಿ ಹಾಗೂ ವಾಸು ಸಂಕಲನ, ಎಸ್ ಜಿ ವಾಸುದೇವ್ ಕಲಾ ನಿರ್ದೇಶನ ಮಾಡಿದ್ದರು.
ಗಿರೀಶ್ ಕಾರ್ನಾಡ್ ಜೊತೆಗೆ ಸ್ನೇಹಲತಾ ರೆಡ್ಡಿ, ಜಯರಾಂ, ಪಿ ಲಂಕೇಶ್, ಪ್ರಧಾನ್, ದಾಶರಥಿ ದೀಕ್ಷಿತ್, ಲಕ್ಷ್ಮಿ ಕೃಷ್ಣಮೂರ್ತಿ, ಜಯದೇವ, ಅರ್ಬುತ ರಾಣಿ, ಲಕ್ಷ್ಮಣ ರಾವ್, ಸಿ ಎಚ್ ಲೋಕನಾಥ್, ಶ್ರೀಕಂಠಯ್ಯ, ಜಿ ಶಿವಾನಂದ್, ಯಶ್ವಂತ ಭಟ್, ವಿಲಾಸ್, ಕೆ ಗೋಪಿ, ಪ್ರಾಣೇಶ, ವಾಸುದೇವ ಮೂರ್ತಿ ಬಿ ಆರ್ ಶಿವರಾಮ್, ಚಂದ್ರಶೇಖರ್, ಸಿ ಆರ್ ಸಿಂಹ, ಶಾಮಣ್ಣ ಶಾಸ್ತ್ರೀ, ಬಾಲಚಂದ್ರ, ಶ್ರೀಕಾಂತ್, ಗಣಪತಿ ಶಾಸ್ತ್ರೀ, ಅಪ್ಪು ರಾವ್, ಬಿ ಎಸ್ ರಾಮ ರಾವ್, ಕೃಷ್ಣ ಭಟ್, ಎ ಎಲ್ ಸೃಣಿವಸಮೂರ್ತಿ, ಗೋದ ರಾಮಕುಮಾರ್, ಭಾರ್ಗವಿ ನಾರಾಯಣ್, ಶಾಂತ ಬಾಯಿ, ವಿಶಾಲಮ್ಮ, ಯಮುನ ಪ್ರಭು, ಎಸ್ತರ್ ಅನಂತಮೂರ್ತಿ, ಆಮ್ಮು ಮಾಥ್ಯೂ, ಚಾಮುಂಡಿ, ಕಸ್ತೂರಿ ಹಾಗೂ ಇತರರು ತಾರಗಣದಲ್ಲಿದ್ದರು.
ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸಿಂಗೀತಂ ಶ್ರೀನಿವಾಸ ರಾವ್ ಸಹ ನಿರ್ದೇಶಕ ಆಗಿ ಕಾನಕಾನಹಳ್ಳಿ ಗೋಪಿ ನಿರ್ದೇಶಕ ಪಟ್ಟಾಭಿರಾಮ ರೆಡ್ಡಿ ಜೊತೆ ಆಗಿದ್ದರು. ರಾಮ್ ಮನೋಹರ್ ಬ್ಯಾನರ್ನಲ್ಲಿ ಡಾ. ಗಿರೀಶ್ ಕಾರ್ನಾಡ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು.