ಚೆನ್ನೈ (ತಮಿಳುನಾಡು): ಇತ್ತೀಚೆಗಷ್ಟೇ ಬಿಡುಗಡೆಯಾದ 'ಅಣ್ಣಾತ್ತೆ' ಸಿನಿಮಾ ಜೀವನದಲ್ಲಿ ಮರೆಯಲಾಗದ ಚಿತ್ರ ಎಂದು ಹೇಳಿರುವ ಸೂಪರ್‌ಸ್ಟಾರ್ ರಜಿನಿಕಾಂತ್, ಈ ಸಿನಿಮಾದ ನಿರ್ದೇಶಕ ಶಿವ ಅವರನ್ನು ಹೊಗಳಿದ್ದಾರೆ.
ತಮ್ಮ ಪುತ್ರಿ ಸೌಂದರ್ಯ ರಜಿನಿಕಾಂತ್ 'ಹೂಟ್' (Hoote) ಆ್ಯಪ್ನಲ್ಲಿ ಧ್ವನಿ ಸಂದೇಶ ನೀಡಿರುವ ತಲೈವಾ, 'ಅಣ್ಣಾತ್ತೆ' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳಲು ಕಾರಣ ಏನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ 'ಪೆಟ್ಟಾ' ಚಿತ್ರ ಬಿಡುಗಡೆಯಾದ ದಿನವೇ ನಿರ್ದೇಶಕ ಶಿವ ಅವರ 'ವಿಶ್ವಾಸಂ' ಸಿನಿಮಾ ಕೂಡ ರಿಲೀಸ್ ಆಗಿತ್ತು. ವಿಶ್ವಾಸಂ ಚಿತ್ರ ನೋಡಿದ ನನಗೆ ನಿರ್ದೇಶಕ ಶಿವ ಹಾಗೂ ನಿರ್ಮಾಪಕ ತ್ಯಾಗರಾಜನ್ ಅವರನ್ನು ಭೇಟಿಯಾಗಿ ಅಭಿನಂದಿಸುವ ಬಯಕೆ ವ್ಯಕ್ತಪಡಿಸಿದ್ದೆ.
ಆದರೆ, ಸ್ವತಃ ಶಿವ ಅವರೇ ನನ್ನ ಮನೆಗೆ ಬಂದರು. ನಿಜಕ್ಕೂ ಶಿವ ನನಗೆ ಇಷ್ಟವಾದರು. ಅವರು ಹೇಳಿದ ಪ್ರತಿಯೊಂದು ಮಾತಿನಲ್ಲೂ ಸತ್ಯವಿರುತ್ತಿತ್ತು, ಅವರೊಬ್ಬ ಮಗುವಿನಂತೆ ಎಂದು ಸೂಪರ್‌ಸ್ಟಾರ್ ಹೇಳಿದ್ದಾರೆ.
![ಸೂಪರ್‌ಸ್ಟಾರ್ ರಜಿನಿಕಾಂತ್](https://etvbharatimages.akamaized.net/etvbharat/prod-images/13645035_dgj.jpg)
ಒಟ್ಟಿಗೆ ಚಿತ್ರ ಮಾಡುವ ವಿಷಯ ಬಂದಾಗ, ಚಿತ್ರ ಮಾಡುವುದು ಮುಖ್ಯವಲ್ಲ. ಆದರೆ, ಹಿಟ್ ನೀಡುವುದು ಮುಖ್ಯವಾಗಿತ್ತು. ಶಿವ ಮಾತ್ರ ನಿಮಗೆ ಹಿಟ್ ಚಿತ್ರ ನೀಡುವುದು ಬಹಳ ಸುಲಭ ಎಂದು ಹೇಳಿದ್ದರು. ಈ ಮಾತನ್ನೆ ಕೇಳಿ ನನಗೆ ಆಶ್ಚರ್ಯವಾಯಿತು.
ಇಲ್ಲಿಯವರೆಗೆ ಯಾರೂ ನನಗೆ ಹಾಗೆ ಹೇಳಿರಲಿಲ್ಲ. ಸಾಮಾನ್ಯವಾಗಿ ಎಲ್ಲರೂ ಹಿಟ್ ಸಿನಿಮಾ ಕೊಡಬಹುದು ಅಥವಾ ಅದಕ್ಕಾಗಿ ಪ್ರಯತ್ನಿಸಬಹುದು ಎಂದು ಹೇಳುತ್ತಿದ್ದರು. ಆದ್ರೆ, ಸುಲಭವಾಗಿ ಹಿಟ್ ಕೊಡಬಹುದು ಎಂದ ಏಕೈಕ ನಿರ್ದೇಶಕ ಶಿವ ಎಂದು ರಜಿನಿಕಾಂತ್ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 'ಅಣ್ಣಾಥೆ' ರಿಲೀಸ್; ತಲೈವಾ ಅಭಿನಯಕ್ಕೆ ಫ್ಯಾನ್ಸ್ ಖುಷ್
ನಾನು ನಟಿಸಿದ ಸಿನಿಮಾ ಹಿಟ್ ಆಗಲಿದೆ ಎಂದು ನೀವು ಹೇಗೆ ವಿಶ್ವಾಸ ಹೊಂದಿದ್ದೀರಿ ಎಂದು ಶಿವನನ್ನು ಕೇಳಿದೆ. ಆಗ ಅವರು ಎರಡು ಅಂಶಗಳನ್ನು ತಿಳಿಸಿದರು. "ಒಂದು, ನೀವು ಉತ್ತಮ ಕಥೆ ಹೊಂದಿರುವ ಚಿತ್ರದಲ್ಲಿರಬೇಕು. ಎರಡನೇಯದಾಗಿ, ನೀವು ಹಳ್ಳಿಯ ಪಾತ್ರದಲ್ಲಿ ನಟಿಸಬೇಕು.
ನೀವು ಅಂತಹ ಪಾತ್ರವನ್ನು ಮಾಡಿ ಬಹಳ ದಿನಗಳಾಗಿವೆ. ಇವೆರಡೂ ಇದ್ದಲ್ಲಿ ಸಿನಿಮಾ ಹಿಟ್ ಆಗೋದು ಪಕ್ಕಾ" ಅಂದಿದ್ದರು. ಹೀಗಾಗಿ ನಾನು ಅವರಿಗೆ ಒಳ್ಳೆಯ ಕಥೆಯೊಂದಿಗೆ ಮತ್ತೆ ಬರುವಂತೆ ಹೇಳಿದ್ದೆ. 20 ದಿನಗಳಲ್ಲಿ ಶಿವ ನನಗೆ ಕಥೆಯನ್ನ ಹೇಳೀದರು. ಅವರು ಕಥೆ ಹೇಳುತ್ತಿರುವಾಗ ನನ್ನ ಕಣ್ಣಲ್ಲಿ ನೀರು ಬಂತು. ನಾನು ಶಿವ ಅವರ ಕೈ ಹಿಡಿದು ಸೂಪರ್ ಎಂದು ಹೇಳಿದೆ ಎಂದು ತಲೈವಾ ಆ ಕ್ಷಣವನ್ನು ಮತ್ತೆ ನೆನಪಿಸಿಕೊಂಡರು.