'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಎಲ್ಲರ ಮನಗೆದ್ದಿದ್ದ ನಟ ರಾಜ್ ಬಿ. ಶೆಟ್ಟಿ ತನಿಖಾಧಿಕಾರಿಯಾಗಿ ಆಗಿ, ನಟಿಸಿರುವ ಚಿತ್ರ 'ಮಹಿರ'. ಈ ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಜೊತೆಗೆ ಆ್ಯಕ್ಷನ್ ಸನ್ನಿವೇಶಗಳು ಇದ್ದು ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ರಾಜ್ ಬಿ. ಶೆಟ್ಟಿ ಅಲ್ಲದೆ ಬಾಂಬೆ ರಂಗಭೂಮಿ ಕಲಾವಿದೆ ವರ್ಜಿನಿಯಾ ರೊಡ್ರಿಗಸ್ ಹಾಗೂ ಚೈತ್ರಾ ಪಾತ್ರಗಳು ಕೂಡಾ ಸಿನಿಪ್ರಿಯರಿಗೆ ಇಷ್ಟವಾಗಿದೆ. ಅದರಲ್ಲಿ ವರ್ಜಿನಿಯಾ ಅವರ ಆ್ಯಕ್ಷನ್ ಬಗ್ಗೆ ಸಿನಿ ಪ್ರಿಯರು, ಹಾಗೂ ಸ್ಯಾಂಡಲ್ವುಡ್ ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಹಾಲಿವುಡ್ ಶೈಲಿಯ ಫೈಟ್ಗಳಿದ್ದು ಇದಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಸಕ್ಸಸ್ ಬಗ್ಗೆ ಹಂಚಿಕೊಳ್ಳಲು ನಿರ್ದೇಶಕ ಮಹೇಶ್ ಗೌಡ ಹಾಗೂ ನಿರ್ಮಾಪಕ ವಿವೇಕ್ ಕೋಡಪ್ಪ, ನಟಿ ಚೈತ್ರಾ, ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶಕ ಮಿಥುನ್ ಸೇರಿದಂತೆ ಚಿತ್ರತಂಡದ ಇನ್ನಿತರ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ನಿರ್ದೇಶಕ ಮಹೇಶ್ ಗೌಡ ಹೇಳುವ ಪ್ರಕಾರ ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ನಲ್ಲಿ 'ಮಹಿರ' ಒಂದೇ ದಿನ 7 ಪ್ರದರ್ಶನ ಕಂಡಿದೆಯಂತೆ. ಶಾಂತಿಯುತ ಜೀವನ ನಡೆಸುತ್ತಿದ್ದ ತಾಯಿ-ಮಗಳ ಜೀವನದಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ಯಾವ ರೀತಿ ಬದಲಾವಣೆ ತರುತ್ತದೆ ಎಂಬುದು ಈ ಚಿತ್ರದ ಸಾರಾಂಶ. ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ಹೆಚ್ಚಾಗಿದ್ದು ಸಿನಿಮಾವನ್ನು ಪ್ರೇಕ್ಷಕರು ಸ್ವೀಕರಿಸಿದ್ದಕ್ಕೆ ಚಿತ್ರತಂಡ ಸಖತ್ ಖುಷಿಯಲ್ಲಿದೆ.