'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಸ್ಪುರದ್ರೂಪಿ ನಟ ಚಂದನ್ ಕುಮಾರ್ 'ರಾಧಾ ಕಲ್ಯಾಣ' ಧಾರಾವಾಹಿಯ ವಿಶು ಪಾತ್ರಧಾರಿಯಾಗಿ ತಮ್ಮ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದರು. ಇಂದು ಚಂದನ್ ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಚಂದು ಪಾತ್ರಕ್ಕೆ ಜೀವ ತುಂಬಿದವರು. ಸದ್ಯಕ್ಕೆ ಚಂದನ್ ಆ ಧಾರಾವಾಹಿಯಿಂದ ಹೊರ ಬಂದಿದ್ದರೂ ಆ ಧಾರಾವಾಹಿಯಲ್ಲಿನ ಅವರ ಪಾತ್ರ ಇನ್ನೂ ಜೀವಂತ. ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 3ರಲ್ಲೂ ಚಂದನ್ ಸ್ಪರ್ಧಿಯಾಗಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಬಂದರು.
ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಾಯಕ ಶಂಕರನ ಪಾತ್ರದಲ್ಲಿ ಚಂದನ್ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗು ಧಾರಾವಾಹಿಯಲ್ಲಿ ಬಣ್ಣ ಹಚ್ಚುವ ಮೂಲಕ ಪರಭಾಷೆಗೂ ಕಾಲಿಟ್ಟಿದ್ದಾರೆ ಕನ್ನಡದ ಚಾಕೊಲೇಟ್ ಹುಡುಗ. ತೆಲುಗು ಧಾರಾವಾಹಿ ’ಸಾವಿತ್ರಮ್ಮಗಾರಿ ಅಬ್ಬಾಯಿ’ಯಲ್ಲಿ ಮುಖ್ಯ ಪಾತ್ರದಲ್ಲಿ ಚಂದನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಲೈಫು ಇಷ್ಟೇನೇ, ಪರಿಣಯ, ಕಟ್ಟೆ, ಲವ್ ಯು ಆಲಿಯಾ, ಕುರುಕ್ಷೇತ್ರ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ಚಂದನ್ ಅಭಿನಯಿಸಿದ್ದಾರೆ. ಇದರೊಂದಿಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಮೊದಲ ಸಿನಿಮಾ ಪ್ರೇಮ ಬರಹ ಸಿನಿಮಾದಲ್ಲಿ ಚಂದನ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಚಂದನ್ ಕುಮಾರ್ಗೆ ಸ್ನೇಹಿತರು, ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ.