ಹುಬ್ಬಳ್ಳಿ : ಹುಬ್ಬಳ್ಳಿ ಮಹಾನಗರ ಪಾಲಿಕೆ ಸ್ಮಾರ್ಟ್‌ಸಿಟಿ ಯೋಜನೆಯಡಿ ರಾಜ್ಯದ ಪ್ರಪ್ರಥಮ ಗ್ರೀನ್ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿದೆ. ಸುಮಾರು 130 ಕೋಟಿ ವೆಚ್ಚದ ಈ ಕಾಮಗಾರಿಯನ್ನು 2020 ರಿಂದ ಪ್ರಾರಂಭಿಸಲಾಗಿದೆ. ರಾಜಕಾಲುವೆ ರಾಜನಂತೆ ಸಿಂಗರಿಸುವ ದೇಶದ ಮೊದಲ ಗ್ರೀನ್ ಮೊಬಿಲಿಟಿ ಕಾರಿಡಾರ್ ಇದಾಗಿದೆ.
ರಾಜಕಾಲುವೆ (ನಾಲಾ) ಎಂದರೆ ಗಬ್ಬುವಾಸನೆ, ಸಾಂಕ್ರಾಮಿಕ ರೋಗಗಳ ತಾಣ ಎಂಬುದು ಸಾಮಾನ್ಯ. ಇದರ ಸಮೀಪ ಹೋಗಲು ಜನತೆ ಹಿಂಜರಿಯುತ್ತಿದ್ದರು. ಉಣಕಲ್ ಕೆರೆಯಿಂದ ಗಬ್ಬೂರು ಕ್ರಾಸ್‌ವರೆಗೂ ಬರೋಬ್ಬರಿ 10 ಕಿಲೋ ಮೀಟರ್ ರಾಜಕಾಲುವೆ ಇದೆ. ಮಳೆ ಬಂದಾಗ ಬರೋಬ್ಬರಿ 18 ಕಡೆಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ನಾಗರಿಕರು ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದರು. 2019ರಲ್ಲಂತೂ ಕೆಲ ಕಡೆಗಳಲ್ಲಿ ಅಕ್ಷರಶಃ ನಡುಗಡ್ಡೆಯಂತಾಗಿತ್ತು.
ಸುಂದರತಾಣ ಮಾಡಲು ಗ್ರೀನ್ ಕಾರಿಡಾರ್: ಮಳೆಗಾಲದಲ್ಲಿ ರಾಜಕಾಲುವೆಯಿಂದ ಪ್ರವಾಹ ಎದುರಾಗದಂತೆ ನೋಡಿಕೊಳ್ಳಬೇಕು. ಜತೆಗೆ ರಾಜಕಾಲುವೆ ಸುಂದರ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಗ್ರೀನ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಇಂದು ರಾಜಕಾಲುವೆ ಸುತ್ತ ಸುಂದರವಾಗಿ ಕಾಣಿಸುತ್ತಿದೆ. ಮಾರ್ಚ್ ಅಂತ್ಯಕ್ಕೆ ಯೋಜನೆ ಮುಗಿಯಲಿದೆ.
ರಾಜಕಾಲುವೆಗೆ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಮಹಾನಗರ ಪಾಲಿಕೆಯ ಅಕ್ಕಪಕ್ಕದ ಜಾಗ ಬಳಸಿ ಎರಡು ಬದಿಗಳಲ್ಲಿ 2.5 ಮೀಟರ್ ಅಗಲದ ವಾಕಿಂಗ್ ಪಾಥ್, 2.5 ಮೀಟರ್ ಅಗಲದ ಸೈಕಲ್ ಪಾಥ್ ನಿರ್ಮಿಸಲಾಗಿದೆ. ಎರಡು ಭಾಗದ ಸಂಪರ್ಕಕ್ಕೆ ಪಾದಚಾರಿ ಸೇತುವೆ ನಿರ್ಮಿಸಲಾಗುತ್ತಿದೆ. ಕಾರಿಡಾರ್ ಮಧ್ಯದಲ್ಲಿ ಧ್ಯಾನ, ಓಪನ್ ಜಿಮ್, ಉದ್ಯಾನವನ ನಿರ್ಮಿಸಲಾಗುತ್ತಿದೆ. ಜತೆಗೆ ಒಂದೆರಡು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಸೈಕಲ್ ಸವಾರಿ ಸ್ಟ್ಯಾಂಡ್ ಮಾಡಲಾಗಿದೆ.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಿಷ್ಟು: ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ರುದ್ರೇಶ ಗಾಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ CITIIS 2.0 ಮಹತ್ವಾಕಾಂಕ್ಷೆ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಣಕಲ್‌ನಾಲಾದಿಂದ ಗಬ್ಬೂರು ಕ್ರಾಸ್‌ವರೆಗೂ ಸುಮಾರು 10 ಕಿಮೀ ವರೆಗೂ ಇರುವ ನಾಲಾದ ಸುತ್ತಲಿನ ವಾತಾವರಣ ಉತ್ತಮಗೊಳಿಸಿ ಸಾರ್ವಜನಿಕರಿಗೆ ಸುಂದರ ತಾಣವನ್ನಾಗಿ ಮಾರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ನಾಲಾಗೆ ತಡೆಗೋಡೆ ಇರಲಿಲ್ಲ. ಒಳಚರಂಡಿ ನೀರು ಸೇರಿಕೊಂಡು ಸಾಂಕ್ರಾಮಿಕ ರೋಗಗಳ ತಾಣವಾಗಿತ್ತು. ಇದನ್ನು ತಡೆಗಟ್ಟಲು ಈ ಯೋಜನೆ ಜಾರಿಗೆ ತರಲಾಗಿದೆ. ಮಳೆಗಾಲದಲ್ಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸುತ್ತಿತ್ತು. ಪ್ರವಾಹ ತಡೆಗಟ್ಟುವ ಮೂಲ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ನಾಲಾ ಒಳಗಡೆ ತಡೆಗೋಡೆ, ಯುಜಿಡಿ ಲೈನ್, ಅದರ ನಡುವೆ ಬರುವ 9 ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗಿದೆ. ಸೈಕಲ್ ಟ್ರ್ಯಾಕ್, ಎಲೆಕ್ಟ್ರಿಕ್ ಪೋಲ್ಸ್ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲೂ ವಾಕ್ ಮಾಡಬಹುದಾಗಿದೆ. ಇದರಿಂದ ಬ್ರಿಡ್ಜ್ ನಿಂದ ಬ್ರಿಡ್ಜ್‌ಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಳೆ ನೀರು ಹಾಗೂ ಚರಂಡಿ ನೀರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಸಿರು ವಾತಾವರಣ ನಿರ್ಮಾಣ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ ಅವಕಾಶ ಕಲ್ಪಿಸುವ ವಿಶೇಷ ಯೋಜನೆ ಇದಾಗಿದೆ ಎಂದರು.
ಇನ್ನೂ ಈ ಯೋಜನೆ ಮುಕ್ತಾಯವಾಗಿಲ್ಲ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ವರೂರಿಗೆ ಮತ್ತೊಂದು ಮುಕುಟಮಣಿ ಸುಮೇರು ಪರ್ವತ : 405 ಅಡಿ ಎತ್ತರದ ವಿಶ್ವವಿಖ್ಯಾತ ಕಟ್ಟಡ ವೈಶಿಷ್ಟ್ಯತೆಯೇ ಕುತೂಹಲಕಾರಿ - SUMERU PARVATHA