ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಇಲ್ಲ- ಸಲ್ಲದ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವಾಲ್ಮೀಕಿ ಸಮಾಜದ ಮುಖಂಡರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಪರ ವಾಲ್ಮೀಕಿ ಸಮಾಜದ ಮುಖಂಡರು ಆರೋಪ ಮಾಡಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಮಾಡಿದ ಅವರು, ಜನಾರ್ದನ ರೆಡ್ಡಿ ಅವರು ಕೀಳು ಮಟ್ಟದ ರಾಜಕಾರಣಿ ಮಾಡುತ್ತಿದ್ದಾರೆ. ವಾಲ್ಮೀಕಿ ಸಮಾಜದಲ್ಲಿ ಶ್ರೀರಾಮುಲು ಓರ್ವ ಮಾಸ್ ಲೀಡರ್ ಇದ್ದು, ಇವರ ಬಗ್ಗೆ ಮಾತನಾಡುವವರು ಇನ್ಮುಂದೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಶ್ರೀರಾಮುಲು ಜೊತೆ ವಾಲ್ಮೀಕಿ ಸಮಾಜ ಇದೆ. ಅವರನ್ನು ಅವನು - ಇವನು ಅಂತಾ ಮಾತನಾಡುವುದು ಸರಿಯಲ್ಲ. ಜನಾರ್ದನ ರೆಡ್ಡಿ ಎನೋಬಲ್ ಫೈನಾನ್ಸ್ ದಿವಾಳಿಯಾಗಿದ್ದಾಗ ಮೊದಲಿಗೆ ಆಸರೆಯಾಗಿದ್ದೇ ಈ ಶ್ರೀರಾಮುಲು. ಆಗ ಕಾಂಗ್ರೆಸ್ ನಗರಸಭೆ ಸದಸ್ಯರಾಗಿದ್ದರು. ಶ್ರೀರಾಮುಲು ಅವರನ್ನು ಜನಾರ್ದನ ರೆಡ್ಡಿ ಬೆಳೆಸಿಲ್ಲ. ಸ್ವಂತ ಶಕ್ತಿಯಿಂದ ಶ್ರೀರಾಮುಲು ರಾಜ್ಯದಲ್ಲಿ ಬೆಳೆದಿದ್ದಾರೆ. ಇದು ವಾಲ್ಮೀಕಿ ಸಮಾಜದ ಒಗ್ಗಟ್ಟುನ್ನು ಒಡೆಯಲು ಪ್ರಯತ್ನ ಎಂದು ಅವರು ಆರೋಪ ಮಾಡಿದರು.
ಇತ್ತೀಚೆಗೆ ನಡೆದ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನಾರ್ದನ ರೆಡ್ಡಿ ಅವರು ಜವಾಬ್ದಾರಿ ತೆಗೆದುಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಗೆಲ್ಲಿಸಲಾಗಲಿಲ್ಲ. ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಅವರನ್ನು ಕೊಲೆಗಡುಕ ಅಂತಾ ಹೇಳಿದ್ದು, ಈ ಪ್ರಕರಣದಲ್ಲಿ ನೀವು ಭಾಗಿಯಾಗಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಜನಾರ್ದನ ರೆಡ್ಡಿ ಅವರೇ ನಿಮ್ಮ ಅಕ್ರಮ ಆಸ್ತಿ, ಬೇನಾಮಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾಗೇಂದ್ರ ಅವರನ್ನೂ ಕೂಡ ಜನಾರ್ದನ ರೆಡ್ಡಿ ಟಿಶು ಪೇಪರ್ ಅಂತಾ ಹೇಳಿದ್ದಾರೆ. ಶ್ರೀರಾಮುಲು ಅವರನ್ನು ಕೊಲೆಗಡುಕ ಎಂದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಎಸ್ಪಿಗೆ ದೂರು ಕೊಡುತ್ತೇವೆ ಎಂದರು.
ರೈಲ್ವೆ ಬಾಬು ಕೊಲೆ ಬಗ್ಗೆ ಮಾತನಾಡುವ ರೆಡ್ಡಿ ಅವರು ಪದ್ಮಾವತಿ ಕೊಲೆ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಹಾಗಾಗಿ ಜನಾರ್ದನರೆಡ್ಡಿ ಅವರು ಶ್ರೀರಾಮುಲು ಅವರಿಗೆ ಕ್ಷಮೆ ಕೇಳಬೇಕು. ಬಿಜೆಪಿ ಪಕ್ಷ ಜನಾರ್ದನರೆಡ್ಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಎಲ್ಲಾ ಎಸ್ಪಿಗಳಿಗೆ ವಾಲ್ಮೀಕಿ ಸಮಾಜದಿಂದ ದೂರು ಕೊಡುತ್ತೇವೆ. ಜನಾರ್ದನರೆಡ್ಡಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಜನಾರ್ದನರೆಡ್ಡಿ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಚೌಕಟ್ಟಿನಲ್ಲಿ ಪ್ರಸ್ತಾಪ: ಅಪಹರಣಕ್ಕೆ ಒಳಗಾದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ಹೇಳಿದ ಬಳಿಕ ಅಲ್ಲಿ ಸೇರಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ವಿಚಾರದಲ್ಲಿ ಪಕ್ಷದ ವರಿಷ್ಠರು ಯಾವ ಹೇಳಿಕೆಯನ್ನು ನೀಡಿದಂತೆ ತಿಳಿಸಿದ್ದಾರೆ. ಎಲ್ಲ ವಿಷಯದ ಕುರಿತು ವರಿಷ್ಠರಿಗೆ ತಿಳಿಸಿದ್ದು, ಅವರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುವೆ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಪ್ರಸ್ತಾಪ ಮಾಡುವೆ ಎಂದು ತಿಳಿಸಿದರು.
ಶ್ರೀರಾಮುಲು ಬಗ್ಗೆ ನೀವು ಅವಹೇಳನಕಾರಿಯಾಗಿ ಮಾತನಾಡಿದ್ದೀರಿ ಎಂದು ವಾಲ್ಮೀಕಿ ಸಮುದಾಯ ನಿಮ್ಮ ವಿರುದ್ಧ ದೂರು ನೀಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ಸಿಬಿಐ ತನಿಖೆ ಎದುರಿಸಿರುವ ನಾನು ಏನೇ ದೂರು ನೀಡಿದರೂ ಫೇಸ್ ಮಾಡುವೆ ಎಂದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್, ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ನಡೆದಿದ್ದು, ಹತ್ಯೆ, ವಂಚನೆ ಅಂತಹ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್ ಅಪಹರಣ: ಭಾರಿ ಹಣಕ್ಕೆ ಬೇಡಿಕೆ - DOCTOR KIDNAPED