ಸಿಲ್ಲಿ ಲಲ್ಲಿ ಭಾಗ 1 ಮುಗಿದು ಅದೆಷ್ಟೋ ವರ್ಷಗಳು ಕಳೆದು ಹೋದರೂ ಜನರ ಮನಸ್ಸಿನಲ್ಲಿ ಅದರ ನೆನಪು ಇನ್ನೂ ಹಸಿರಾಗಿದೆ. ಪ್ರತಿಯೊಂದು ಪಾತ್ರವೂ ಕೂಡಾ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ವಿಠಲ್ ರಾವ್, ಲಲಿತಾಂಬ, ವಿಶಾಲೂ, ರಂಗನಾಥ, ಸಿಲ್ಲಿ, ಪಲ್ಲಿ, ಸೂಜಿ ಹೀಗೆ ಪ್ರತಿಯೊಂದು ಪಾತ್ರವೂ ವಿಶಿಷ್ಠವಾಗಿವೆ.
ಸಿಲ್ಲಿ ಲಲ್ಲಿಯಲ್ಲಿ 'ಐ ಲವ್ ಯೂ ಸೂಜಿ', 'ನಾನ್ಸೆನ್ಸ್', 'ಶ್ರೀರಂಗ ಪಟ್ಣಕ್ಕೆ ಎಷ್ಟು ಬಸ್ ಚಾರ್ಜ್?' ಎಂಬ ಡೈಲಾಗ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಪಲ್ಲಿ ಆಲಿಯಾಸ್ ಪ್ರಶಾಂತ್ ನೀರಗುಂದ್ ಶೇಷಾದ್ರಿ ಇದೀಗ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರಮನೆ ಗಿಳಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಭಾವ ರಾಮುವಾಗಿ ನಟಿಸುತ್ತಿರುವ ಪ್ರಶಾಂತ್ ಅಲ್ಲಿಯೂ ಕಾಮಿಡಿ ಪಂಚ್ಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
ಜಿ.ವಿ. ಅಯ್ಯರ್ ಅವರ ನಾಟ್ಯರಾಣಿ ಶಕುಂತಲಾ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಬಂದ ಪ್ರಶಾಂತ್ ಮುಂದೆ ವಠಾರ, ಭಾಗ್ಯ, ನಾ ನಿನ್ನ ಬಿಡಲಾರೆ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ ನಿನಗಾಗಿ, ಒಲವೇ, ಜೂಟ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ನಟನೆಯತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಪ್ರಶಾಂತ್ ನಟನೆಯ ಸಲುವಾಗಿ ಮತ್ತಷ್ಟು ಕಲಿಯಲು ಕಲಾ ಗಂಗೋತ್ರಿ ತಂಡ ಸೇರಿದರು. ಮಳೆ ನಿಲ್ಲುವವರೆಗೆ, ಸ್ಮಶಾನ ಕುರುಕ್ಷೇತ್ರ, ಶ್ರೀಕೃಷ್ಣ ಸಂಧಾನ, ಮುಖ್ಯಮಂತ್ರಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿರುವ ಪ್ರಶಾಂತ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸೀದಾ ಹಾರಿದ್ದು ಲಂಡನ್ಗೆ. ಅಲ್ಲಿಯ ಕೋವೆಂಟ್ರಿ ಯೂನಿವರ್ಸಿಟಿಯಲ್ಲಿ ನಟನೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡಾ ಪ್ರಶಾಂತ್ ಪಡೆದರು. ಮಾತ್ರವಲ್ಲ ಲಂಡನ್ನ ಇಮ್ಯಾಜೀನಿಯರ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯಲ್ಲಿ ಬರೋಬ್ಬರಿ ಐದು ವರ್ಷ ಕೆಲಸ ಮಾಡಿದ್ದರು.
ಮುಂದೆ ಲಂಡನ್ನಿಂದ ಊರಿಗೆ ಮರಳಿದ ಬಹುಮುಖ ಪ್ರತಿಭೆ ಪ್ರಶಾಂತ್ ಸಿಲ್ಲಿ ಲಲ್ಲಿಯ ಕಲಾವಿದರೊಂದಿಗೆ ಸೇರಿ ಲೈಮ್ ಲೈಡ್ ಅಕಾಡೆಮಿ ಎಂಬ ನಟನಾ ಕೇಂದ್ರವನ್ನು ಶುರು ಮಾಡಿಯೇ ಬಿಟ್ಟರು. ಹೊಚ್ಚ ಹೊಸದಾಗಿ ನಟನೆಯ ಜಾಡು ಹಿಡಿದು ಬರುವವರನ್ನು ಚೆನ್ನಾಗಿ ಪಳಗಿಸುವುದೇ ಲೈಮ್ ಲೈಡ್ನ ಉದ್ದೇಶ. ಅರ್ಥಾತ್ ನಟನೆಯ ಕುರಿತಾದ ತರಬೇತಿ ನೀಡುವ ಈ ಸಂಸ್ಥೆಯಲ್ಲಿ ಇದೀಗ ಹಲವರು ನಟನೆಯ ತರಬೇತಿ ಪಡೆದುಕೊಂಡಿದ್ದಾರೆ.