ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ತಮ್ಮ 44ನೇ ವಯಸ್ಸಿನಲ್ಲಿ ಇವತ್ತು ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಇವರು ಸರಿಸುಮಾರು 325ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದರು.
ಈಡೇರಲಿಲ್ಲ ಬುಲೆಟ್ ಪ್ರಕಾಶ್ ಕೊನೆಯಾಸೆ!
ಸ್ಯಾಂಡಲ್ವುಡ್ನಲ್ಲಿ ದರ್ಶನ್ ಜೊತೆ ಉತ್ತಮವಾಗಿ ಒಡನಾಟ ಹೊಂದಿದ್ದ ಈ ನಟ ಕಳೆದ ಕೆಲ ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಕೆಲಸವನ್ನೂ ಅವರು ಮಾಡಿದ್ದರು. ತಾನು ಕೊನೆಯುಸಿರೆಳೆಯುವುದಕ್ಕೂ ಮುನ್ನ ದರ್ಶನ್ ಜೊತೆ ಮತ್ತೊಮ್ಮೆ ನಟಿಸಬೇಕು ಎಂಬ ಆಸೆಯನ್ನು ಅವರೊಮ್ಮೆ ಹೇಳಿಕೊಂಡಿದ್ದರು. ಆದರೆ ಈ ಕನಸು ಕೊನೆಗೂ ನನಸಾಗಲಿಲ್ಲ.
ಬುಲೆಟ್ ಪ್ರಕಾಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಗೆಳೆಯರಾಗಿದ್ದರು. ಡಿಬಾಸ್ ಜೊತೆ ಉತ್ತಮ ಒಡನಾಟ ಹೊಂದಿದ್ದ ಪ್ರಕಾಶ್, 'ಭಗವಾನ್', 'ಧ್ರುವ', 'ಬಾಸ್', 'ಶೌರ್ಯ', 'ಐರಾವತ', 'ಕಲಾಸಿಪಾಳ್ಯ', 'ದತ್ತ', 'ನಿನಗೋಸ್ಕರ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
1999ರಲ್ಲಿ ತೆರೆಕಂಡ ನಿರ್ಮಾಪಕ ರಾಮು ಅವರ 'ಎಕೆ 47' ಸಿನಿಮಾದ ಮೂಲಕ ಫುಲ್ ಟೈಮ್ ನಟನಾಗಿ ಪ್ರಕಾಶ್ ಎಂಟ್ರಿಯಾಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಎದುರು ಪ್ರಕಾಶ್ ನಟಿಸಿದ್ದರು. ಇನ್ನು ಸುದೀಪ್ ಜತೆ 'ಪಾರ್ಥ', 'ಹುಚ್ಚ', 'ಬಚ್ಚನ್', 'ಮಸ್ತ್ ಮಜಾ ಮಾಡಿ', 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳಲ್ಲೂ ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿಕೊಂಡಿದ್ದರು. ರವಿಚಂದ್ರನ್ ಅವರೊಂದಿಗೆ 9 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
ಇನ್ನು 'ಪ್ರೀತ್ಸು ತಪ್ಪೇನಿಲ್ಲ', 'ಜಾಕಿ', 'ರಾಟೆ', 'ಏಕಾಂಗಿ', 'ಪುಂಗಿದಾಸ', 'ಅಹಂ ಪ್ರೇಮಾಸ್ಮಿ', 'ಸಾಹೇಬ' ಹೀಗೆ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಂಜಿಸಿದ ಬುಲೆಟ್ ಪ್ರಕಾಶ್ ಅವರನ್ನು ಕನ್ನಡ ಚಿತ್ರಲೋಕ ಕಳೆದುಕೊಂಡಿದೆ.