ಕನ್ನಡ ಸೇರಿ ಆರು ಭಾಷೆಗಳಲ್ಲಿ ಸಿದ್ದವಾಗಿರುವ ಕಿಚ್ಚ ಸುದೀಪ್ ಅವರ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ‘ಪೈಲ್ವಾನ್’ ನಿನ್ನೆ ಕನ್ನಡ ಆವೃತ್ತಿಗೆ ಬೆಂಗಳೂರಿನಲ್ಲಿ ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿ ಯು/ಎ ಅರ್ಹತಾ ಪತ್ರ ನೀಡಿದೆ.
ಕನ್ನಡದಲ್ಲಿ ಯು/ಎ ಅರ್ಹತಾ ಪತ್ರ ಪಡೆದ ‘ಪೈಲ್ವಾನ್’ ತಮಿಳು, ಮಲಯಾಳಂ, ಹಿಂದಿ, ತೆಲುಗು ಭಾಷೆಗಳಲ್ಲೂ ಆಯಾ ರಾಜ್ಯಗಳಲ್ಲಿ ಸೆನ್ಸಾರ್ ಮನ್ನಣೆ ಪಡೆಯುವಾಗ ಯಾವ ಅರ್ಹತಾ ಪತ್ರ ಸಿಕ್ಕುವುದು ಎಂದು ಕಾದು ನೋಡಬೇಕಿದೆ.
ಎಸ್.ಕೃಷ್ಣ ಹಾಗೂ ಅವರ ಮಡದಿ ಸ್ವಪ್ನಾ ಆರ್ಆರ್ಆರ್ ಬ್ಯಾನರ್ನಡಿ ಸುಮಾರು ₹50 ಕೋಟಿ ವೆಚ್ಚ ಮಾಡಿ ನಿರ್ಮಾಣ ಆಗಿರುವ ಈ ಸಿನಿಮಾ 40 - 50 ನಿಮಿಷದ ಗ್ರಾಫಿಕ್ಸ್ ಒಳಗೊಂಡಿದೆ. ಹಾಗಂತ ಈ ಗ್ರಾಫಿಕ್ ಅನ್ನು ಪಾತ್ರಗಳಿಗೆ ಬಳಸಿಕೊಂಡಿಲ್ಲ, ಕೇವಲ ಚಿತ್ರೀಕರಣದ ಸ್ಥಳಗಳಿಗೆ, ಕ್ರೌಡ್ ವಿಚಾರವಾಗಿ ಬಳಸಿಕೊಳ್ಳಲಾಗಿದೆ.
ಬಹು ದೊಡ್ಡ ತಾರಾಗಣದ ಪೈಲ್ವಾನ್ನಲ್ಲಿ 90% ರಂಗಭೂಮಿ ಕಲಾವಿದರಿದ್ದಾರೆ. ಚಿತ್ರದ ಕಥಾ ನಾಯಕಿ ಆಕಾಂಕ್ಷ ಸಿಂಗ್, ಸುಶಾಂತ್, ಕಬೀರ್ ಸಹ ರಂಗಭೂಮಿ ಇಂದ ಬಂದವರು. ಸುನಿಲ್ ಶೆಟ್ಟಿ ಸಹ ಚಿತ್ರದ ಪ್ರಮುಖ ಪಾತ್ರದಾರಿ. ನಿರ್ದೇಶಕ ಕೃಷ್ಣ ಅವರು ಕಿಚ್ಚ ಸುದೀಪ್ ಅವರನ್ನು ಈ ಹಿಂದೆ ‘ಹೆಬ್ಬುಲಿ’ ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದರು. ಈಗ ‘ಪೈಲ್ವಾನ್’ ಸಿನಿಮಾಕ್ಕೆ ವಿಶೇಷ ತಯಾರಿ ಮಾಡಿಕೊಂಡು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಲ್ಲಿ ಕುಸ್ತಿ ಹಾಗೂ ಬಾಕ್ಸಿಂಗ್ ಪ್ರಮುಖ ಕ್ರೀಡೆಗಳಾಗಿ ಹೊರ ಹೊಮ್ಮಿದೆ. ಅರ್ಜುನ್ ಜನ್ಯ ಸಂಗೀತ, ಕರುಣಾಕರನ್ ಛಾಯಾಗ್ರಹಣ, ರುಬೆನ್ ಸಂಕಲನ ಈ ಚಿತ್ರಕ್ಕಿದೆ.
ಸದ್ಯಕ್ಕೆ ಕನ್ನಡದಲ್ಲಿ ಮುಂದಿನ ತಿಂಗಳು ‘ಪೈಲ್ವಾನ್’ ಕೆಆರ್ಜಿ ಸ್ಟುಡಿಯೋ ಇಂದ ಬಿಡುಗಡೆ ಆಗುತ್ತಿದೆ. ಜೀ ಸಂಸ್ಥೆ ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯ ‘ಪೈಲ್ವಾನ್’ ಬಿಡುಗಡೆ ಮಾಡುತ್ತಿದೆ, ತೆಲುಗು ಭಾಷೆಯಲ್ಲಿ ಬಿಡುಗಡೆ ಹಕ್ಕನ್ನು ವರಾಹಿ ಸ್ಟುಡಿಯೋ ಪಡೆದುಕೊಂಡಿದೆ. ಲಹರಿ ಸಂಸ್ಥೆ ಧ್ವನಿ ಸಾಂದ್ರಿಕೆ ಹಕ್ಕನ್ನು ಖರೀದಿಸಿದೆ. ವಿದೇಶದಲ್ಲಿ ಪ್ರೈಮ್ ಸ್ಟೂಡಿಯೋಸ್ ಬಿಡುಗಡೆ ಮಾಡಲಿದೆ.