ಕಾರವಾರ: ಪಹರೆ ಹೆಸರಿನ ಸಂಘಟನೆ ಕಳೆದ 6 ವರ್ಷಗಳಿಂದ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ ಮಾಡುತ್ತಾ ಬರುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ ನಂತರ ಪ್ರೇರೇಪಣೆಗೊಂಡ ಕೆಲವರು ನಗರದಲ್ಲಿ ಪಹರೆ ಅನ್ನುವ ಸಂಘಟನೆ ಕಟ್ಟಿಕೊಂಡು ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾರೆ. ಪ್ರತಿ ಶನಿವಾರದಂತೆ ನಗರದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಕಡಲ ತೀರ, ಪಾರ್ಕ್ ಸೇರಿದಂತೆ ಹಲವೆಡೆ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದ ಪಹರೆ ವೇದಿಕೆ ಇಂದಿಗೆ 317ನೇ ವಾರ ಪೂರೈಸಿದೆ.
ಈ ಹಿನ್ನೆಲೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಕಾಳಿಸಂಗಮ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ಚಿತ್ರನಟ- ನಿರ್ದೇಶಕ ಅರುಣ್ ಸಾಗರ್ ಸಹ ಪಾಲ್ಗೊಂಡಿದ್ದರು. ಸಾಕಷ್ಟು ಪ್ರವಾಸಿಗರು ಭೇಟಿ ನೀಡುವ ಹಾಗೂ ಕಾಳಿ ನದಿ ಸಮುದ್ರ ಸೇರುವ ಪವಿತ್ರ ಸ್ಥಳವಾದ ಕಾಳಿ ಸಂಗಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ರಾಶಿಯಾಗಿ ಗಬ್ಬೆದ್ದು ಹೋಗಿತ್ತು. ಈ ನಿಟ್ಟಿನಲ್ಲಿ ಇಂದು ವಾರದ ಸ್ವಚ್ಛತೆ ಹಮ್ಮಿಕೊಂಡ ಪಹರೆ ಕಾರ್ಯಕರ್ತರು ಕಡಲ ತೀರದಲ್ಲಿ ಸ್ವಚ್ಛತೆ ಮಾಡಿದರು.
ಇನ್ನು ಪಹರೆ ಸಂಘಟನೆ ಕಾರ್ಯಕರ್ತರು ಪ್ರತಿ ಶನಿವಾರ ಬೆಳಗ್ಗೆ ಕಾರವಾರ ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದು, ವಾರಕ್ಕೊಂದು ಸ್ಥಳದಲ್ಲಿ ಸ್ವಚ್ಛತೆ ಮಾಡುವ ಕಾರ್ಯವನ್ನು ಕಾರ್ಯಕರ್ತರು ಹಮ್ಮಿಕೊಳ್ಳುತ್ತಾರೆ. ಈ ಸಂಘಟನೆಯಲ್ಲಿ ವಕೀಲರು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವೃತ್ತಿ ಮಾಡುವಂತಹ ಜನರು ಸಹ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಸ್ವಚ್ಛತೆ ನಮ್ಮ ಹಕ್ಕು ಅನ್ನೋ ಮನೋಭಾವನೆ ಬೆಳೆಸಿಕೊಂಡಿದ್ದಾರೆ. ಇದಲ್ಲದೆ ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಸ್ವಚ್ಛತೆಯಲ್ಲಿ ತೊಡಗಿರುವುದು ಸಂಘಟನೆಯ ವಿಶೇಷ. ಇವತ್ತು ಸಹ ಮುನ್ನೂರಕ್ಕೂ ಅಧಿಕ ಮಂದಿ ಒಟ್ಟಾಗಿ ಕಾಳಿ ಸಂಗಮದಲ್ಲಿ ಸುಮಾರು ಎರಡು ತಾಸುಗಳವರೆಗೆ ಸ್ವಚ್ಛತೆ ಮಾಡಿದ್ದು, ಕಲಾವಿದ ಅರುಣ್ ಸಹ ಸ್ವಚ್ಛತೆಯಲ್ಲಿ ಭಾಗವಹಿಸಿ ಸಂತಸಪಟ್ಟರು.
ಓದಿ : ಕೌಟುಂಬಿಕ ಕಲಹ: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನಿಂದ ಹೊಡೆದ ಪತಿರಾಯ