67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಚಿತ್ರ 'ಅಕ್ಷಿ'. ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಗೌಡ ಅಲಿಯಾಸ್ ಗೋವಿಂದೇಗೌಡ ಇದರಲ್ಲಿ ನಟಿಸಿದ್ದಾರೆ. ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್, ನಾಗರಾಜ್ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ.
ಈ ಚಿತ್ರವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಲಾದೇಗುಲ ಫಿಲಂಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಅಕ್ಷಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 3ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಈವಿಚಾರವನ್ನು ಹೇಳಿಕೊಳ್ಳಲೆಂದು ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಷ್ಟೇ ಅಲ್ಲ, ಪಿಆರ್ಕೆ ಸಂಸ್ಥೆಯೂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆ ವಿಚಾರವನ್ನು ತಂಡ ನೆನಪು ಮಾಡಿಕೊಂಡಿತು. ಪುನೀತ್ ಭಾವಚಿತ್ರಕ್ಕೆ ನಮಿಸುವ ಮೂಲಕ ಮಾತುಕತೆ ಆರಂಭವಾಯಿತು.
ಮೊದಲಿಗೆ ಕಲಾದೇಗುಲ ಶ್ರೀನಿವಾಸ್ ಮಾತನಾಡಿ, ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ಅವರನ್ನು ಭೇಟಿಯಾಗಿದ್ದೆವು. ನಾನು ಸಿನಿಮಾ ನೋಡಬೇಕು ಎಂದು ಅಪ್ಪು ಅವರು ಆಸೆ ಪಟ್ಟರು. ಅಂತೆಯೇ ನಾವು ಅವರಿಗೆ ಖಾಸಗಿ ಲಿಂಕ್ ಒಂದನ್ನು ನೀಡಿದೆವು.
ಆದರೆ, ಅವರು ಸಿನಿಮಾ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸು ಹೇಳುತ್ತಿದೆ ಅವರು ಸಿನಿಮಾ ನೋಡಿದ್ದಾರೆಂದು. ಒಂದೊಮ್ಮೆ ಅವರು ನೋಡಿಲ್ಲವಾದರೆ ಅವರು ದಾನ ಮಾಡಿರುವ ಕಣ್ಣುಗಳಾದರೂ 'ಅಕ್ಷಿ' ಸಿನಿಮಾವನ್ನು ನೋಡುತ್ತವೆ ಅಂತಾ ಸುದ್ದಿಗೋಷ್ಠಿಯಲ್ಲಿ ಕಲಾದೇಗುಲ ಶ್ರೀನಿವಾಸ್ ಹೇಳಿದರು.
ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ರಾಜ್‌ಕುಮಾರ್. ನನ್ನ ಊರು ಹಾಸನ ಜಿಲ್ಲೆಯ ಬೇಲೂರು. ವರನಟ ರಾಜ್‌ಕುಮಾರ್ ಅವರು ನಿಧನರಾದ ದಿನಗಳಲ್ಲಿ ನಾನು ಆಗ ಊರಿನಲ್ಲಿದ್ದೆ. ಅವರು ಇನ್ನಿಲ್ಲ ಅಂತಾ ಜನರು ದುಃಖ ಪಡುತ್ತಿದ್ದ ಹೊತ್ತಲೇ ಅವರು ಕಣ್ಣನ್ನು ದಾನ ಮಾಡಿದ್ರಂತೆ ಅಂತಾ ಅಚ್ಚರಿ ವ್ಯಕ್ತಪಡಿಸುತ್ತಿದ್ರು.
ಆ ಸಂಬಂಧವಾಗಿ ಸಾಕಷ್ಟು ಸುದ್ದಿ ಬಂದಿದ್ದವು. ಅದು ನನಗೆ ಒಂಥರಾ ಕಾಡತೊಡಗಿತು. ನೇತ್ರದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತಾ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ. ಮುಂದೆ ಶ್ರೀನಿವಾಸ್ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತಾ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತು ಅಂದರು.
ಈ ಸಿನಿಮಾವನ್ನು ವಿತರಣೆ ಮಾಡುತ್ತಿರುವ ಜಾಕ್ ಮಂಜು, ನನಗೆ ಸಿನಿಮಾ ಇಷ್ಟವಾಯಿತು. ಈ ಸಿನಿಮಾವನ್ನು ಹೆಚ್ಚಿನ ಜನರಿಗೆ ತೋರಿಸಬೇಕೆಂಬ ಉದ್ದೇಶದಿಂದ ಸಿನಿಮಾ ವಿತರಣೆ ಮಾಡುತ್ತಿದ್ದೇನೆ. ಸಿನಿಮಾ ನೋಡುವಾಗ ನನಗೆ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರುಗಳೇ ನೆನಪಾಗುತ್ತಿದ್ದರು. ಈ ಸಿನಿಮಾವನ್ನು ನೋಡಿದ ಬಳಿಕ ನನ್ನ ಮಗನೇ ನನ್ನ ಬಳಿ ಬಂದು ನೇತ್ರದಾನ ಮಾಡುವುದಾಗಿ ಹೇಳಿದ ಎಂದ್ರು.
ಪ್ರಶಸ್ತಿ ವಿಜೇತ ಸಿನಿಮಾಗಳಿಗೆ ಚಿತ್ರಮಂದಿರ ನೀಡಿ ಎಂದು ಕೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ಕಮರ್ಷಿಯಲ್ ಸಿನಿಮಾಗಳಿಗೂ ಜನ ಬರದ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಪ್ರಶಸ್ತಿ ವಿಜೇತ ಸಿನಿಮಾ ಎಂದು ಬೇರೆ ದೃಷ್ಟಿಯಲ್ಲಿ ನೋಡುವ ಅಗತ್ಯವಿಲ್ಲ ಎಂದು ಜಾಕ್ ಮಂಜು ಹೇಳಿದರು.
ಅಕ್ಷಿ ಚಿತ್ರಕ್ಕೆ ಮುಕಲ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್ ಜತೆಗೆ ರವಿ ಹಾಗೂ ರಮೇಶ್ ಬಂಡವಾಳ ಹಾಕಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಸಂಗೀತವಿದೆ.