1980ರ ರೈತ ಬಂಡಾಯದ "ನರಗುಂದ ಬಂಡಾಯ" ಈಗ ತೆರೆಮೇಲೆ ಬರುತ್ತಿದ್ದು, ಸದ್ಯ ನರಗುಂದ ಬಂಡಾಯ ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಚಿತ್ರದ ಆಡಿಯೋ ಇಂದು ಬಿಡುಗಡೆ ಆಗಿದೆ. ಇನ್ನು ಆಡಿಯೋವನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿ, ನರಗುಂದ ರೈತರ ಹೋರಟದ ಬಗ್ಗೆ ಸಿನಿಮಾ ಮಾಡಿರೋದು ತುಂಬಾ ಖುಷಿಯ ವಿಚಾರ. ಚಿತ್ರದ ಟ್ರೈಲರ್ ಕೂಡ ತುಂಬಾ ಪ್ರಾಮಿಸಿಂಗ್ ಆಗಿದೆ. ಅಲ್ಲದೆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ರಕ್ಷ್ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಜೊತೆಗೆ ಶುಭ ಪೂಂಜ ಕೂಡ ಚೆನ್ನಾಗಿ ಕಾಣಿಸುತ್ತಾರೆ ನಾಗೇಂದ್ರ ಮಾಗಡಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ನರಗುಂದ ಬಂಡಾಯ 1980 ರಲ್ಲಿ ನಡೆದ ನರಗುಂದ ರೈತರ ಹೋರಾಟ ಕುರಿತಾದ ಚಿತ್ರವಾಗಿದೆ. ಉತ್ತರ ಕರ್ನಾಟಕದ ಮಲಪ್ರಭಾ ಅಣೆಕಟ್ಟಿನ ಫಲಾನುಭವಿ ರೈತರು ವರ್ಷಕ್ಕೆ ಒಂದು ಎಕರೆಗೆ 2,500 ಕಂದಾಯ ಕಟ್ಟಬೇಕೆಂದು ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು. ವಿಪರ್ಯಾಸ ಅಂದರೆ ಅಂದಿನ ಕಾಲದಲ್ಲಿ ಒಂದು ಎಕರೆ ಬೆಲೆ 2,500 ಆಗಿತ್ತು. ಆದರೆ ಸರ್ಕಾರ ರೈತರಿಗೆ ಇಂಥ ಕಂದಾಯ ವಿಧಿಸಿರುವುದನ್ನು ಖಂಡಿಸಿ ರೈತರು ಬಂಡಾಯವೆದ್ದಿದ್ದರು. ಇನ್ನು ಈ ಬಂಡಾಯದಲ್ಲಿ ಪೊಲೀಸರ ಗೋಲಿಬಾರ್ಗೆ ನವಲಗುಂದದ ರೈತ ಮುಖಂಡ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಅಳಗವಾಡಿಯ ಬಸಪ್ಪ ಲಕ್ಕುಂಡಿ ಬಲಿಯಾಗಿದ್ದರು. ಈ ಕಥೆಯನ್ನು ಆಧರಿಸಿ ಈಗ ನಿರ್ದೇಶಕ ನಾಗೇಂದ್ರ ಮಾಗಡಿ ನರಗುಂದ ಬಂಡಾಯ ಚಿತ್ರ ನಿರ್ಮಿಸಿದ್ದಾರೆ.
ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಪಾತ್ರದಲ್ಲಿ ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಕ್ಷ್ ನಟಿಸಿದ್ದು, ನಾಯಕಿಯಾಗಿ ಶುಭ ಪೂಂಜ ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಎಸ್.ಜಿ ಸಿದ್ದೇಶ್ ಕಥೆ ಬರೆಯುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನು ಚಿತ್ರದಲ್ಲಿ ಮೂರು ಹಾಡುಗಳಿದ್ದು ಯಶೋವರ್ಧನ್ ಸಂಗೀತ ನೀಡಿದ್ದು, ಸಂಭಾಷಣೆಕಾರ ಕೇಶವಾದಿತ್ಯ ಮೂರು ಹಾಡುಗಳನ್ನು ಬರೆದಿದ್ದಾರೆ. ಇನ್ನು ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು ಸಾಧುಕೋಕಿಲ, ನೀನಾಸಂ, ಅಶ್ವತ್, ಅವಿನಾಶ್, ಭವ್ಯ, ರವಿಚೇತನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇದೇ ಮಾರ್ಚ್ 12ಕ್ಕೆ ನರಗುಂದ ಬಂಡಾಯ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.