ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚದಲ್ಲಿ ಯಾರೇ ನಟನಾದರೂ, ತಮ್ಮ ಸಿನಿಮಾ ಜರ್ನಿಯಲ್ಲಿ ಏರು ಪೇರುಗಳನ್ನು ಎದುರಿಸಲೇಬೇಕು. ಒಂದು ಸಮಯದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟ ನಟರು ಕೆಲವೊಮ್ಮೆ ಸಾಲು ಸಾಲು ಸೋಲುಗಳನ್ನು ಅನುಭವಿಸಿದ್ದಾರೆ.
ಆದರೆ ಬ್ರೇಕ್ಗಾಗಿ ಕಾಯುವ ಈ ನಟರಿಗೆ ಒಂದೇ ಒಂದು ಚಿತ್ರ ಸೂಪರ್ ಹಿಟ್ ಆಗಿ ಆ ನಟನ ಕೈ ಹಿಡಿಯುವಂತೆ ಮಾಡುತ್ತದೆ. ಇಂತಹ ಸನ್ನಿವೇಶ ಕನ್ನಡದ ಬಹಳಷ್ಟು ನಟರಿಗೆ ಎದುರಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸೆಂಚುರಿ ಸ್ಟಾರ್ ಅಂತ ಬ್ಯ್ರಾಂಡ್ ಆಗಿರುವ ನಟ ಶಿವರಾಜ್ ಕುಮಾರ್. 'ಆನಂದ್' ಚಿತ್ರದ ಮೂಲಕ ಸಿನಿಮಾ ಜರ್ನಿ ಶುರು ಮಾಡಿರುವ ಹ್ಯಾಟ್ರಿಕ್ ಹೀರೋ ಸಿನಿಮಾ ಪಯಣದಲ್ಲಿ ಕೂಡಾ ಏರಿಳಿತಗಳಿವೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಎಲ್ಲಾ ಬಗೆಯ ಪಾತ್ರಗಳನ್ನು ಮಾಡಿರುವ ಹ್ಯಾಟ್ರಿಕ್ ಹೀರೋಗೆ 2011-2013 ವರೆಗೆ ಮಾಡಿದ ಜೋಗಯ್ಯ, ಲಕ್ಷ್ಮಿ, ಅಂದರ್ ಬಾಹರ್, ಶಿವ ಸೇರಿದಂತೆ ಹಲವು ಸಿನಿಮಾಗಳು ಸೋಲಿನ ಸುಳಿಯಲ್ಲಿ ಸಿಲುಕುವಂತೆ ಮಾಡಿದವು.
ಆಗ ಶಿವರಾಜ್ ಕುಮಾರ್ಗೆ ಬ್ರೇಕ್ ನೀಡಿದ ಸಿನಿಮಾ ಭಜರಂಗಿ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿ ಒಳ್ಳೆ ಹೆಸರು ತಂದು ಕೊಡ್ತು.ಅಲ್ಲಿಂದ ವಜ್ರಕಾಯ, ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ, ಟಗರು ಸೇರಿ ಹಲವು ಹಿಟ್ ಗಳನ್ನ ಕೊಡುತ್ತಾ ಬಂದಿದ್ದಾರೆ ಶಿವಣ್ಣ.
ಕನ್ನಡ ಚಿತ್ರರಂಗದಲ್ಲಿ ಶೋ ಮ್ಯಾನ್ ಅಂತ ಕರೆಸಿಕೊಂಡಿರುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತಗಾರನಾಗಿ, ಸಾಹಿತಿಯಾಗಿ, ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಎಂದು ಕರೆಸಿಕೊಂಡಿರುವ ಕ್ರೇಜಿ ಸ್ಟಾರ್ ಕೂಡಾ ಯುಗಾದಿ, ರಾಜಕುಮಾರಿ, ಅಹಂ ಪ್ರೇಮಾಸ್ಮಿ, ದಶಮುಖ, ಪರಮಶಿವ, ಕ್ರೇಜಿ ಸ್ಟಾರ್ ಹೀಗೆ ಹಲವು ಚಿತ್ರಗಳಿಂದ ಸೋಲಿನ ವ್ಯೂಹದಲ್ಲಿ ಸಿಲುಕಿಕೊಂಡಿದ್ದರು. ಆದರೆ 2004ರಲ್ಲಿ ರವಿಚಂದ್ರನ್ಗೆ ಕಮ್ ಬ್ಯಾಕ್ ಮಾಡಿಸಿದ ಚಿತ್ರ 'ದೃಶ್ಯ'. ರೊಮ್ಯಾಟಿಂಕ್ ಹೀರೋ ಆಗಿ ಸಿನಿಮಾ ಪ್ರಿಯರಿಗೆ ಇಷ್ಟ ಆಗಿದ್ದ ರವಿಚಂದ್ರನ್ ಈ ಚಿತ್ರದಲ್ಲಿ ಜವಾಬ್ದಾರಿಯುತ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಪಿ. ವಾಸು ನಿರ್ದೇಶನದ ಈ ಚಿತ್ರದಿಂದ ಕನಸುಗಾರನಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
ಬುದ್ಧಿವಂತ ನಟ ಕಮ್ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಡಮ್ ಪಡೆದ ನಟ ರಿಯಲ್ ಸ್ಟಾರ್ ಉಪೇಂದ್ರ. ಎ, ಬುದ್ಧಿವಂತ, ಸೂಪರ್ ಅಂತಹ ಹಿಟ್ ಸಿನಿಮಾಗಳನ್ನು ಮಾಡಿದ ರಿಯಲ್ ಸ್ಟಾರ್ಗೆ ಸೋಲಿನ ಕಹಿ ಅನುಭವ ಆಗಿದ್ದು ಟೋಪಿವಾಲ, ಉಪ್ಪಿ 2,ಉಪೇಂದ್ರ ಮತ್ತೆ ಬಾ ಸಿನಿಮಾಗಳಿಂದ. ಈ ಚಿತ್ರಗಳ ನಂತರ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಅಲ್ಲೂ ಕೂಡಾ ಕೈ ಸುಟ್ಟಿಕೊಂಡು ಕೊನೆಗೆ 'ಐ ಲವ್ ಯೂ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಗುಡ್ ಕಮ್ ಬ್ಯಾಕ್ ಮಾಡಿದರು.
ಪವರ್ ಸ್ಟಾರ್ ಪುನೀತ್ ಕುಮಾರ್ಗೂ ಸೋಲು ಬಿಟ್ಟಿಲ್ಲ. ಜಾಕಿ ಮತ್ತು ಹುಡುಗರು ಚಿತ್ರದ ನಂತರ ತೆರೆಕಂಡ ಪುನೀತ್ ರಾಜಕುಮಾರ್ ಸಿನಿಮಾಗಳು ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ. ಆಗ ಪುನೀತ್ ರಾಜ್ ಕುಮಾರ್ ಕೈ ಹಿಡಿದಿದ್ದು 'ಪವರ್' ಚಿತ್ರ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವ ಮೂಲಕ ಒಳ್ಳೆ ಯಶಸ್ಸು ತಂದು ಕೊಡ್ತು.
ಕನ್ನಡ ಹಾಗೂ ಬೇರೆ ಭಾಷೆಯಲ್ಲಿ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿದಿರುವ ನಟ ಕಿಚ್ಚ ಸುದೀಪ್. 2007ರಲ್ಲಿ ಕಾಶಿ ಫ್ರಮ್ ವಿಲೇಜ್, ಮಹಾರಾಜ, ನಂ 73 ಶಾಂತಿನಿವಾಸ, ಗೂಳಿ, ಕಿಚ್ಚ ಹುಚ್ಚ ಚಿತ್ರಗಳು ಸುದೀಪ್ಗೆ ಅಷ್ಟೊಂದು ಯಶಸ್ಸು ತಂದು ಕೊಡಲಿಲ್ಲ. ಆಗ ಸುದೀಪ್ ಆ್ಯಕ್ಟಿಂಗ್ ಜೊತೆಗೆ ಡೈರೆಕ್ಷನ್ ಮಾಡಿದ 'ವೀರ ಮದಕರಿ' ಸಿನಿಮಾ ಅವರ ಕೈ ಹಿಡಿಯಿತು. ಅಲ್ಲಿಂದ ಸುದೀಪ್ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ತನ್ನ ಪ್ರತಿಭೆ ಏನು ಎಂಬುದನ್ನು ತೋರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಲೈಟ್ ಬಾಯ್, ಹೀರೋ ಆಗಬಹುದು ಅನ್ನೋದನ್ನು ತೋರಿಸಿಕೊಟ್ಟವರು ಚಾಲೆಂಜಿಂಗ್ ಸ್ಟಾರ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ನಟ ದರ್ಶನ್. ಮಾಸ್ ಸಿನಿಮಾಗಳಿಂದಲೇ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿರುವ ದರ್ಶನ್, ಸೋಲಿನ ಸುಳಿಯಲ್ಲಿ ಸಿಲುಕಿದ್ರು ಅನ್ನೋದಕ್ಕೆ 2009-2011ರ ವರೆಗೆ ರಿಲೀಸ್ ಆದ ಅಭಯ್, ಯೋಧ, ಶೌರ್ಯ,ಪ್ರಿನ್ಸ್ ಸಿನಿಮಾಗಳು ಸಾಕ್ಷಿ. ಆ ದಿನಗಳಲ್ಲಿ ದರ್ಶನ್ಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ 'ಸಾರಥಿ'.
ಸ್ಯಾಂಡಲ್ವುಡ್ನಲ್ಲಿ ತನ್ನ ಪ್ರತಿಭೆಯಿಂದಲೇ ಗೋಲ್ಡನ್ ಸ್ಟಾರ್ ಆದ ನಟ ಗಣೇಶ್. 'ಮುಂಗಾರು ಮಳೆ' ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಗಣೇಶ್ ಕೂಲ್ ಸಿನಿಮಾದಿಂದ ಸಂಕಷ್ಟಕ್ಕೆ ಸಿಲುಕಿದ್ರು. 2011 ರಿಂದ ನಟಿಸಿದ ಶೈಲೂ, ಮುಂಜಾನೆ, ಮಿಸ್ಟರ್ 420, ಆಟೋ ರಾಜ, ರೋಮಿಯೋ, ಸಕ್ಕರೆ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಮುಗ್ಗರಿಸಿದವು. ಆಗ ಗಣೇಶ್ಗೆ ಬೇಡಿಕೆ ಕಡಿಮೆ ಆಯ್ತು. ನಂತರ ಅವರಿಗೆ ಬ್ರೇಕ್ ನೀಡಿದ್ದು2013 ರಲ್ಲಿ ತೆರೆಕಂಡ 'ಶ್ರಾವಣಿ ಸುಬ್ರಮಣ್ಯ' ಚಿತ್ರ.
ಚಂದ್ರ ಚಕೋರಿ ಚಿತ್ರದಿಂದ ಭರ್ಜರಿ ಇನ್ನಿಂಗ್ಸ್ ಆರಂಭಿಸಿದ ನಟ ಶ್ರೀಮುರಳಿ, ಕಡಿಮೆ ಸಮಯದಲ್ಲಿ ಸ್ಟಾರ್ ಆದವರು. ಆದರೆ ಕಂಠಿ ನಂತರ ಬಂದ ಹಲವಾರು ಸಿನಿಮಾಗಳು ಶ್ರೀಮುರಳಿ ಅವರಿಗೆ ಸಿನಿಮಾ ಸಾಕು ಎನ್ನುವಂತೆ ಮಾಡಿತ್ತು. ಸುಮಾರು 10 ವರ್ಷಗಳ ನಂತರ ಚಿತ್ರರಂಗದಿಂದ ದೂರ ಉಳಿದ ಶ್ರೀಮುರಳಿ 2014ರಲ್ಲಿ 'ಉಗ್ರಂ' ಸಿನಿಮಾ ಮೂಲಕ ಸ್ಟಾರ್ಗಿರಿ ಪಡೆದರು. ಆ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟು ಇದೀಗ ರೋರಿಂಗ್ ಸ್ಟಾರ್ ಆಗಿದ್ದಾರೆ.
ಒಟ್ಟಿನಲ್ಲಿ ಎಷ್ಟೇ ದೊಡ್ಡ ನಟರಾದರೂ ಅವರಿಗೆ ಸೋಲಿನ ರುಚಿ ತಿಳಿದಿರುತ್ತದೆ ಎಂಬುದಕ್ಕೆ ಈ ಸಿನಿಮಾಗಳೇ ಸಾಕ್ಷಿ.