ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹರೆಡ್ಡಿ' ಸಿನಿಮಾ ಶೂಟಿಂಗ್ ಮುಗಿಸಿ ಎಡಿಟಿಂಗ್ ಹಂತದಲ್ಲಿದೆ. ಈ ನಡುವೆ ಚಿರಂಜೀವಿ ತಮ್ಮ 152ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಇದಕ್ಕಾಗಿ ಭಾರೀ ವರ್ಕೌಟ್ ಕೂಡಾ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ.
ತಮ್ಮ 152ನೇ ಸಿನಿಮಾಗಾಗಿ ಚಿರಂಜೀವಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಸಹಾಯ ಪಡೆದಿದ್ದಾರಂತೆ. ಈ ಸಿನಿಮಾದಲ್ಲಿ ಚಿರು ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು ಪಾತ್ರಕ್ಕೆ ತೂಕ ಇಳಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಜಿಮ್ನಲ್ಲಿ ಕಸರತ್ತು ಆರಂಭಿಸಿರುವ ಚಿರುಗೆ ಸಲ್ಮಾನ್ ಖಾನ್ ಪರ್ಸನಲ್ ಟ್ರೈನರ್ ತರಬೇತಿ ನೀಡುತ್ತಿದ್ದಾರಂತೆ. ಸಲ್ಮಾನ್ ಖಾನ್ ಹಾಗೂ ಚಿರಂಜೀವಿ ಬಹಳ ವರ್ಷಗಳಿಂದ ಒಳ್ಳೆಯ ಸ್ನೇಹಿತರಾಗಿದ್ದು, ತನ್ನ ಗೆಳೆಯ ಚಿರಂಜೀವಿಗಾಗಿ ಸಲ್ಮಾನ್ ತಮ್ಮ ಪರ್ಸನಲ್ ಟ್ರೈನರನ್ನು ಚಿರು ಬಳಿ ಕಳುಹಿಸಿದ್ದಾರಂತೆ. ಈಗಾಗಲೇ ಈ ಫಿಟ್ನೆಸ್ ಟ್ರೈನರ್ ಹೈದರಾಬಾದ್ಗೆ ಬಂದಿದ್ದು, ಅವರ ನಿರ್ದೇಶನದಲ್ಲಿ ಚಿರು ವರ್ಕೌಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಇತರ ನಟ,ನಟಿಯರ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ ಎನ್ನಲಾಗಿದೆ.
ಸಲ್ಮಾನ್ ಖಾನ್ ತನ್ನ ಫಿಟ್ನೆಸ್ ಟ್ರೈನರನ್ನು ಮೆಗಾ ಫ್ಯಾಮಿಲಿಗಾಗಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ್ಚರಣ್ ತೇಜ ಅಭಿನಯದ ‘ವಿನಯ ವಿಧೇಯ ರಾಮ‘ , ‘ಧ್ರುವ‘ ಸಿನಿಮಾ ಚಿತ್ರೀಕರಣದ ವೇಳೆ ಕೂಡಾ ಸಲ್ಲು ತಮ್ಮ ಟ್ರೈನರನ್ನು ಕಳುಹಿಸಿದ್ದರಂತೆ. ಏನೇ ಆಗಲಿ ಸಲ್ಲು-ಚಿರು ಸ್ನೇಹ ಇದೇ ರೀತಿ ಚಿರಕಾಲ ಇರಲಿ ಎಂದು ಇಬ್ಬರ ಅಭಿಮಾನಿಗಳು ಹಾರೈಸುತ್ತಿದ್ದಾರಂತೆ.