2015ರಲ್ಲಿ ಸುಖ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರ ಬ್ಲಾಕ್ಬಾಸ್ಟರ್ ಹಿಟ್ ಆಗಿತ್ತು. ಅಲ್ಲದೆ ಆ ಚಿತ್ರದ ಮರೆಯದೇ ಕ್ಷಮಿಸು ನೆನಪಾದರೆ ಎಂಬ ಹಾಡು ಕೂಡ ಸಿನಿ ರಸಿಕರ ಮನಗೆದ್ದಿತ್ತು. ಈಗ ಹೊಸ ತಂಡವೊಂದು ಕೆಂಡಸಂಪಿಗೆ ಚಿತ್ರದ ಹಾಡಿನ ಪದಗಳೇ ಸ್ಫೂರ್ತಿಯಾಗಿದ್ದು, ‘ಮರೆಯದೆ ಕ್ಷಮಿಸು’ ಎಂಬ ಟೈಟಲ್ ಇಟ್ಟುಕೊಂಡು ನೆನಪಾದರೆ ಎಂಬ ಸಬ್-ಟೈಟಲ್ ನೊಂದಿಗೆ ಸಿನಿಮಾ ಮಾಡಲು ರೆಡಿಯಾಗಿದೆ.
ನಿನ್ನೆ ಬನಶಂಕರಿ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ಚಿತ್ರದ ಮುಹೂರ್ತ ಸರಳವಾಗಿ ನೇರವೇರಿದ್ದು, ಇಂದಿನಿಂದ ಚಿತ್ರ ಸೆಟ್ ಏರಲಿದೆ.
ಇನ್ನು ಈ ಚಿತ್ರವನ್ನು ಹೊಸ ನಿರ್ದೇಶಕ ರಾಘವ್ ನಿರ್ದೇಶಿಸುತ್ತಿದ್ದು. ಮರೆಯದೇ ಕ್ಷಮಿಸು ಚಿತ್ರ ಒಂದು ಪಕ್ಕಾ ಲವ್ ಸ್ಟೋರಿ ಯಾಗಿದೆ. ಇಂದಿನ ಯುವಜನತೆಗೆ ಒಂದು ಮೆಸೇಜ್ ಕೊಡುವ ಸಿನಿಮಾ ಎಂದು ನಿರ್ದೇಶಕ ರಾಘವ ತಿಳಿಸಿದರು. ಅಲ್ಲದೆ ಚಿತ್ರದಲ್ಲಿ ನಾಯಕನಾಗಿ ಪ್ರಮೋದ್ ಬೋಪಣ್ಣ ನಟಿಸುತ್ತಿದ್ದಾರೆ.
ಮರೆಯದೇ ಕ್ಷಮಿಸು ಚಿತ್ರ ಪ್ರಮೋದ್ ಬೋಪಣ್ಣ ಅಭಿನಯದ 3 ನೇ ಚಿತ್ರವಾಗಿದ್ದು, ಈ ಹಿಂದೆ ಪ್ರಮೋದ್ ನಟಿಸಿದ 2 ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. ಈ ಚಿತ್ರದಲ್ಲಿ ಪ್ರಮೋದ್ ಗಾರೆ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಕಾಣಿಸುತ್ತಿದ್ದು. ಶ್ರೀಮಂತ ಮನೆತನದ ಹುಡುಗಿಯ ಪ್ರೀತಿ ಮಾಡುವ ಹುಡುಗನಾಗಿ ತೆರೆಮೇಲೆ ಬರಲಿದ್ದಾರೆ.
ಪ್ರಮೋದ್ ಬೋಪಣ್ಣಗೆ ನಾಯಕಿಯಾಗಿ ಇನ್ನು ಬಿಡುಗಡೆಯಾಗದ ಹಳ್ಳಿ ಪಂಚಾಯಿತಿ ಚಿತ್ರದಲ್ಲಿ ನಟಿಸಿರುವ ಮೇಘನಾ ಗೌಡ ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಮೇಘನಾ ಟ್ರೆಡಿಷನಲ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸುತ್ತಿದ್ದು, ಆರ್.ವಿ.ಎಸ್ ಪ್ರೊಡಕ್ಷನ್ ಬ್ಯಾನರ್ ಅಡಿ ವಿ ಶಿವರಾಮು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಂಡ್ಯ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.