ಬೆಂಗಳೂರು : ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಬೇಕಿದ್ದ ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಚಿತ್ರವನ್ನು ಫೆಬ್ರವರಿ 18 ರವರೆಗೆ ಥಿಯೇಟರ್ನಲ್ಲಾಗಲೀ, ಓಟಿಟಿ ಮೂಲಕವಾಗಲೀ ಬಿಡುಗಡೆ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಚಿತ್ರ ನಿರ್ಮಾಪಕ ಚಕ್ರವರ್ತಿ ಸಿಹೆಚ್ ತಮಗೆ ಒಂದೂವರೆ ಕೋಟಿಗೂ ಅಧಿಕ ಹಣ ನೀಡಬೇಕಿದ್ದು, ಇನ್ನೂ ಪಾವತಿಸಿಲ್ಲ ಎಂದು ಆರೋಪಿಸಿ ಎಸ್ಪಿಎಮ್ ಆರ್ಟ್ಸ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
2018ರ ಜೂನ್ 25ರಂದು ಎಸ್ಪಿಎಮ್ ಆರ್ಟ್ಸ್ ಹಾಗೂ ಚಿತ್ರ ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಚಿತ್ರದ ಎಲ್ಲ ಹಕ್ಕುಗಳೂ ಅರ್ಜಿದಾರರಿಗೆ ಸೇರಿರುವುದು ಕಂಡುಬರುತ್ತಿದೆ. ಹೀಗಾಗಿ, ಅರ್ಜಿದಾರ ಸಂಸ್ಥೆ ಎಸ್ಪಿಎಮ್ ಆರ್ಟ್ಸ್ ಕೋರಿಕೆಯಂತೆ ಚಿತ್ರದ ನಿರ್ಮಾಪಕರು ಫೆಬ್ರವರಿ 18ರವರೆಗೆ ಚಿತ್ರವನ್ನು ಥಿಯೇಟರ್ನಲ್ಲಾಗಲೀ, ಓಟಿಟಿ ಮೂಲಕವಾಗಲೀ ಬಿಡುಗಡೆ ಮಾಡಬಾರದು ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಅಲ್ಲದೇ ಚಿತ್ರ ನಿರ್ಮಾಪಕ ಚಕ್ರವರ್ತಿ ಸೇರಿದಂತೆ 6 ಮಂದಿ ಪ್ರತಿವಾದಿಗಳಿಗೆ ಫೆ.18ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.