ಲವ್ಲೀ ಸ್ಟಾರ್ ಪ್ರೇಮ್ ಸಿನಿಮಾ ಜರ್ನಿಯಲ್ಲಿ 25ನೇ ಸಿನಿಮಾ ಅಂತಾ ಕರೆಯಿಸಿಕೊಂಡಿರುವ ಸಿನಿಮಾ ಪ್ರೇಮಂ ಪೂಜ್ಯಂ. ನವೆಂಬರ್ 12ರಂದು ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳು ಮತ್ತು ವಿದೇಶಗಳಲ್ಲೂ ರಿಲೀಸ್ ಆಗಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರೋ ಪ್ರೇಮಂ ಪೂಜ್ಯಂ ಸಿನಿಮಾ ಯಶಸ್ವಿ 25ನೇ ದಿನಗಳತ್ತ ದಾಪುಗಾಲು ಇಡುತ್ತಿದೆ.
ಮುದ್ದಾದ ಲವ್ ಸ್ಟೋರಿ ಕಥೆ ಆಧರಿಸಿರೋ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದರು ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿವೆ. ಸದ್ಯ ಕೆಜಿರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರದಲ್ಲಿ ಈ ವಾರ ಕಾಲೇಜ್ ಹುಡುಗ ಹಾಗೂ ಹುಡುಗಿಯರಿಂದ ತುಂಬಿತ್ತು.
ಈ ವಿಷಯವನ್ನ ತಿಳಿದ ನಿರ್ದೇಶಕ ರಾಘವೇಂದ್ರ ಬಿ.ಎಸ್ ಹಾಗೂ ನಟ ಪ್ರೇಮ್ ಅವರು ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ಬಗ್ಗೆ ಸಾಕಷ್ಟು ಮಾತುಕತೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಪ್ರೇಮ್ ಅಭಿನಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ಪ್ರೀತಿ, ಸ್ನೇಹ ಫ್ಯಾಮಿಲಿ ಎಮೋಷನ್‌ಗಳನ್ನ ಪ್ರೇಮಂ ಪೂಜ್ಯಂ ಸಿನಿಮಾ ಒಳಗೊಂಡಿದೆ. ವೃತ್ತಿಯಲ್ಲಿ ನರರೋಗ ತಜ್ಞರಾಗಿರುವ ಡಾ. ರಾಘವೇಂದ್ರ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಹೊಸ ರೀತಿಯಲ್ಲಿ ಲವ್ ಸ್ಟೋರಿ ಹೇಳಿದ್ದಾರೆ. ನಿರ್ದೇಶಕ ರಾಘವೇಂದ್ರ ತಾವೇ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಅಂದ ಹಾಗೇ ಚಿತ್ರದ ಹೆಸರೇ ಹೇಳುವಂತೆ, ಪ್ರೇಮಂ ಪೂಜ್ಯಂ ರೊಮ್ಯಾಂಟಿಕ್ ಲವ್ ಸ್ಟೋರಿ ಕತೆ. ಈ ಚಿತ್ರದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಪ್ರೀತಿಯ ಆರಾಧಕನಾಗಿ ಕಾಣಿಸಿಕೊಂಡಿದ್ದಾರೆ. ಯುವ ನಾಯಕಿ ಬೃಂದಾ ಆಚಾರ್ಯ ಪ್ರೇಮ್‌ಗೆ ಜೋಡಿಯಾಗಿದ್ದಾರೆ.
ಇನ್ನು ಪ್ರೇಮ್ ಹಾಗೂ ಬೃಂದಾ ಅಲ್ಲದೇ ಈ ಚಿತ್ರದಲ್ಲಿ ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್, ತಪಸ್ವಿನಿ ಮಾತ್ರವಲ್ಲ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.
ಕೆಡಂಬಾಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಪ್ರೇಮ ಪೂಜ್ಯಂ ಚಿತ್ರಕ್ಕೆ ಡಾ. ರಕ್ಷಿತ್ ಕೆಡಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಅದ್ದೂರಿ ವೆಚ್ಚದಲ್ಲಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಮಾಧವ್ ಕ್ರೀನಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿರುವ ಪ್ರೇಮಂ ಪೂಜ್ಯಂ ಸಿನಿಮಾಗೆ ಸಿನಿಮಾ ಪ್ರಿಯರು ಮನ ಸೋತಿದ್ದಾರೆ ಅನ್ನೋದಕ್ಕೆ ತ್ರಿವೇಣಿ ಚಿತ್ರಮಂದಿರಕ್ಕೆ ಬಂದಿರುವ ಸಿನಿಮಾ ಪ್ರೇಕ್ಷಕರೇ ಸಾಕ್ಷಿ.