ಈ ಹಿಂದೆ ಸೈಕೋ ಎಂಬ ಚಿತ್ರ ನಿರ್ದೇಶಿಸಿದ್ದ ದೇವದತ್ತ ಬಹಳ ವರ್ಷಗಳ ನಂತರ ಸುದ್ದಿಯಲ್ಲಿದ್ದಾರೆ. ಸೈಕೋ ನಂತರ ಇನ್ನೊಂದೆರೆಡು ಚಿತ್ರಗಳನ್ನು ದೇವದತ್ತ ಘೋಷಿಸಿದ್ದರಾದರೂ ಆ ಚಿತ್ರಗಳು ಬರಲೇ ಇಲ್ಲ. ಈಗ ದೇವದತ್ತ ಇನ್ನೊಂದು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಅದೇ ಲವ್ ಮೀ ಆರ್ ಹೇಟ್ ಮೀ.
ಈ ಹೆಸರು ಇತ್ತೀಚೆಗಷ್ಟೇ ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದನಿಸಬಹುದು. ಹೌದು, ಇತ್ತೀಚೆಗಷ್ಟೇ ಮದರಂಗಿ ಕೃಷ್ಣ ಮತ್ತು ರಚಿತಾ ರಾಮ್ ಅಭಿನಯದ ಹೊಸ ಚಿತ್ರಕ್ಕೆ ಲವ್ ಮೀ ಆರ್ ಹೇಟ್ ಮೀ ಎಂಬ ಹೆಸರನ್ನು ಇಡಲಾಗಿದೆ ಎಂದು ಸುದ್ದಿಯಾಗಿತ್ತು. ಆ ಹೆಸರನ್ನು ತಾವು ಮೊದಲೇ ರಿಜಿಸ್ಟರ್ ಮಾಡಿಸಿದ್ದಾಗಿ ದೇವದತ್ತ ಘೋಷಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ದೇವದತ್ತ ಕನ್ನಡ ಚಲನಚಿತ್ರ ಅಕಾಡೆಮಿಯಲ್ಲಿ ‘ಲವ್ ಮೀ ಆರ್ ಹೆಟ್ ಮೀ’ ಟೈಟಲ್ ದಾಖಲಿಸಿದ್ದರಂತೆ. ಚಿತ್ರೀಕರಣ ಪ್ರಾರಂಭವಾದ ಮೇಲೆ ಚಿತ್ರದ ಪ್ರಚಾರ ಮಾಡೋಣ ಎಂದು ಸುಮ್ಮನಿದ್ದರಂತೆ. ಆದರೆ, ಅಷ್ಟರಲ್ಲಿ ಲಾಕ್ಡೌನ್ ಆಗಿದೆ. ಲಾಕ್ಡೌನ್ ಮುಗಿದ ಮೇಲೆ ಚಿತ್ರದ ಬಗ್ಗೆ ಮಾತಾಡೋಣ ಎನ್ನುವಷ್ಟರಲ್ಲಿ ನಿರ್ದೇಶಕ ದೀಪಕ್ ಗಂಗಾಧರ್ ಅದೇ ಹೆಸರಿನ ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ದೇವದತ್ತ ಮಾಧ್ಯಮದವರ ಮುಂದೆ ಬಂದಿದ್ದಾರೆ.
ನಾವು ಮೊದಲು ಹೆಸರು ದಾಖಲಿಸಿದ್ದರಿಂದ ಅದೇ ಹೆಸರಿನಲ್ಲಿ ಚಿತ್ರ ಮಾಡುವುದಾಗಿ ಹೇಳುತ್ತಿದ್ದಾರೆ. ಎಲ್ಲ ಸರಿ, ದೇವದತ್ತ ಕೇಳಿದ ತಕ್ಷಣ ದೀಪಕ್ ಗಂಗಾಧರ್ ಚಿತ್ರದ ಶೀರ್ಷಿಕೆಯನ್ನು ಬಿಟ್ಟುಕೊಡುತ್ತಾರಾ ಎಂಬುದು ಸದ್ಯಕ್ಕಿರುವ ಪ್ರಶ್ನೆಯಾಗಿದೆ.