ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ
ಶನಿವಾರ ನಿರ್ಮಾಪಕ ಮುನಿರತ್ನ ಪತ್ರಿಕಾಗೋಷ್ಟಿ ನಡೆಸಿ ಸಿನಿಮಾ ಬಿಡುಗಡೆ ಕುರಿತಾದ ಮಾಹಿತಿಯನ್ನು ನೀಡಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಲಿದೆ. ಈ ಮೂಲಕ ದುರ್ಯೋಧನನಾಗಿ ನಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿಮನ್ಯು ಪಾತ್ರಕ್ಕೆ ಜೀವ ತುಂಬಿರೋ ನಿಖಿಲ್ ಕುಮಾರಸ್ವಾಮಿ ನಟನೆಯ ಯುದ್ಧಕ್ಕೆ ಥಿಯೇಟರ್ಗಳು ಸಾಕ್ಷಿಯಾಗಲಿವೆ.
3D ಕೆಲಸ ಬಾಕಿ ಇದ್ದದ್ದರಿಂದ ಸಿನಿಮಾ ಬಿಡುಗಡೆಯಾಗೋದು ಲೇಟ್ ಆಗಿದೆ ಅಷ್ಟೆ. ಮಾಮೂಲಿ ಸಿನಿಮಾಗೆ 3D ಕೆಲಸಕ್ಕೆ ಸಮಯ ಕಡಿಮೆ ಬೇಕಾಗುತ್ತದೆ. ಅದರೆ ಕುರುಕ್ಷೇತ್ರ ಪೌರಾಣಿಕ ಸಿನಿಮಾವಾದ್ದರಿಂದ 3D ಮಾಡುವುದಕ್ಕೆ ವಿಳಂಬವಾಯ್ತು. ಕುರುಕ್ಷೇತ್ರ ಸಿನಿಮಾಗೆ ಆರು ತಿಂಗಳ ಹಿಂದೆಯೇ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿದೆ. ಇದೀಗ 3D ಸಿನಿಮಾ ಕೂಡ ಸಿದ್ಧವಾಗಿದ್ದು, ಆ. 9ರಂದು ಪ್ರಪಂಚದಾದ್ಯಂತ ಸಿನಿಮಾ ಏಕಕಾಲದಲ್ಲಿ ರಿಲೀಸ್ ಆಗಿಲಿದೆ ಎಂದರು.
ಚಿತ್ರಕ್ಕೆ ಹರಿಕೃಷ್ಣ ನೀಡಿರೋ ಸಂಗೀತ ಅದ್ಭುತವಾಗಿದ್ದು, ಜುಲೈ ಮೊದಲನೇ ವಾರ ಆಡಿಯೋ ಲಾಂಚ್ ನಡೆಯಲಿದೆ. ಇನ್ನು ಇಂತಹ ಸಿನಿಮಾ ಮಾಡುವಾಗ ಸಾಕಷ್ಟು ಶ್ರಮ ಬೇಕು. ನಟರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಸಿನಿಮಾ ಮಾಡೋದು ಸುಲಭವಲ್ಲ. ಎಡಿಟಿಂಗ್ ಮಾಡೋದು ಶ್ರಮದ ಕೆಲಸ ಆಗಿತ್ತು ಎಂದರು.
ಹಾಗೇ ಈ ಚಿತ್ರದ ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಗು ಸಂಕಲನಕಾರ ಜಾನಿ ಹರ್ಷ ಈ ಕುರುಕ್ಷೇತ್ರ ಸಿನಿಮಾದ ವಿಶೇಷತೆ ಬಗ್ಗೆ ಹಂಚಿಕೊಂಡರು. ಬಹುಕೋಟಿ ವೆಚ್ಚದ, ಬಹು ತಾರಾಗಣದ ಕುರುಕ್ಷೇತ್ರ ಚಿತ್ರ ಐದು ಭಾಷೆಯಲ್ಲಿ ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.