ನಿರ್ಮಾಪಕ ಕೆ.ಪಿ ಶ್ರೀಕಾಂತ್ ‘ಟಗರು’ ಸಿನಿಮಾ ನಂತರ ಇದರ ಸಿಕ್ವೆಲ್ ಬರಲಿದೆ ಎಂದು ಘೋಷಿಸಿದ್ದರು. ಅದಕ್ಕೆ ತಕ್ಕ ಹಾಗೆ ನಿರ್ದೇಶಕ ಸೂರಿ ಕೂಡ 'ಟಗರು' ಚಿತ್ರದ ಕೊನೆಯ ದೃಶ್ಯದಲ್ಲಿ ಒಂದು ಸನ್ನಿವೇಶ ಜೋಡಿಸಿದ್ದರು.
ಶಿವಣ್ಣನ 'ಟಗರು' ಶತದಿನೋತ್ಸವ ಕಾರ್ಯಕ್ರಮದಲ್ಲೂ 'ಟಗರು-2' ಬಗ್ಗೆ ಕೆ.ಪಿ ಶ್ರೀಕಾಂತ್ ಪ್ರಸ್ತಾಪ ಮಾಡಿದ್ದರು. ಆದರೆ, ಅವರು ಸದ್ಯಕ್ಕೆ ಆ ಸಿನಿಮಾ ನಿರ್ಮಿಸುತ್ತಿಲ್ಲ. ಅದರ ಜಾಗಕ್ಕೆ ದುನಿಯಾ ವಿಜಯ್ ನಟನೆಯ ‘ಸಲಗ’ ಸೇರಿಕೊಂಡಿದೆ. ಈ ಚಿತ್ರಕ್ಕೆ ಶ್ರೀಕಾಂತ್ ಬಂಡವಾಳ ಹಾಕುತ್ತಿದ್ದು, ಮುಂದಿನ ತಿಂಗಳಿನಿಂದ ಈ ಚಿತ್ರದ ಕೆಲಸ ಶುರು ಮಾಡಲಿದ್ದಾರೆ.
‘ಮಾಸ್ತಿ ಗುಡಿ’ ನಂತರ ವಿಜಿ ಅವರ ವೃತ್ತಿ ಜೀವನದಲ್ಲಿ ಕೊಂಚ ಏರುಪೇರಾಯಿತು. ಅವರಿಗೆ ಈಗ ಒಂದು ಅರ್ಜೆಂಟ್ ಹಿಟ್ ಸಿನಿಮಾ ಬೇಕಿದೆ. ಕರಿಚಿರತೆ ನಟಿಸಿದ್ದ ಕನಕ ಹಾಗೂ ಜಾನಿ ಜಾನಿ ಯೆಸ್ ಪಪ್ಪಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ‘ಕುಸ್ತಿ’ ಸಿನಿಮಾದಲ್ಲಿ ಮಗ ಸಾಮ್ರಾಟ್ ಜೊತೆ ಸಿನಿಮಾ ಮಾಡುವುದಾಗಿ ವಿಜಯ್ ಹೇಳಿದ್ದರು. ಮಗನಿಗೆ ತರಬೇತಿ ಸಹ ನೀಡಿದ್ದರು. ಆ ಸಿನಿಮಾ ಸದ್ಯಕ್ಕೆ ಸ್ಥಗಿತವಾಗಿದೆ. ಇದೀಗ ‘ಸಲಗ’ ಚಿತ್ರ ಶುರು ಮಾಡಿದ್ದಾರೆ. ಇದು ನೈಜ ಘಟನೆಗಳ ಆಧಾರಿತ ಚಿತ್ರ.
‘ಚೌಕಾಬಾರ’ ಕಿರು ಚಿತ್ರ ಮತ್ತು ‘ಚೂರಿ ಕಟ್ಟೆ’ ಸಿನಿಮಾ ನಿರ್ದೇಶಕ ರಾಘು ಶಿವಮೊಗ್ಗ ‘ಸಲಗ’ ನಿರ್ದೇಶಕರೂ ಅಂತಾ ಹೇಳಲಾಗಿದೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಒದಗಿಸಲಿದ್ದಾರೆ. ಸಲಗ ಮೊದಲು ದುನಿಯಾ ಟಾಕೀಸ್ ಅಡಿಯಲ್ಲಿ ವಿಜಯ್ ಅವರ ನಿರ್ಮಾಣ ಅಂತಾ ಹೇಳಲಾಗಿತ್ತು. ಈಗ ನಿರ್ಮಾಪಕರ ಜಾಗಕ್ಕೆ ಕೆ.ಪಿ. ಶ್ರೀಕಾಂತ್ ಬಂದಿದ್ದಾರೆ.