ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿದ್ದ ಉಪೇಂದ್ರ ಅಭಿನಯದ 'ಕಬ್ಜ' ಕೊನೆಗೂ ಇಂದಿನಿಂದ ಪ್ರಾರಂಭವಾಗಲಿದೆ. ತೆಲುಗಿನಲ್ಲಿ 'ಗನಿ' ಎಂಬ ಚಿತ್ರವನ್ನು ಮುಗಿಸಿ ಬಂದಿರುವ ಉಪೇಂದ್ರ, ಇಂದಿನಿಂದ 'ಕಬ್ಜ' ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. 'ಕಬ್ಜ' ಚಿತ್ರ ಪ್ರಾರಂಭವಾಗಿ ಒಂದು ವರ್ಷವೇ ಕಳೆದಿದೆ. ಕಳೆದ ವರ್ಷ ಚಿತ್ರದ ಮುಹೂರ್ತ ನಡೆದು ಶಿವರಾಜ್ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು.
'ಕಬ್ಜ' ಸಿನಿಮಾ ಈ ವೇಳೆಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ, ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಅವರ ಯೋಚನೆಗಳನ್ನು ತಲೆಕೆಳಕು ಮಾಡಿತು. ಬಹಳ ದಿನಗಳ ನಂತರ ಮತ್ತೆ ಚಿತ್ರೀಕರಣ ಆರಂಭವಾಗಲಿದ್ದು ಚಂದ್ರು ತಾವು ಮೊದಲು ಮಾಡಿದ್ದ ಪ್ಲ್ಯಾನ್ನಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದಾರಂತೆ. ಇದಕ್ಕೂ ಮುನ್ನ ಚಂದ್ರು, ಹೈದರಾಬಾದ್ನಲ್ಲಿ 'ಕಬ್ಜ' ಚಿತ್ರೀಕರಣ ಮಾಡಲು ನಿರ್ಧರಿಸಿದ್ದರಂತೆ. ಆದರೆ ಇದೀಗ ಬೆಂಗಳೂರಿನ ಮಿನರ್ವ ಮಿಲ್ನಲ್ಲೇ ಶೂಟಿಂಗ್ ಮಾಡಲು ಸಿದ್ಧತೆ ನಡೆಸಿದ್ದು 40 ಸೆಟ್ಗಳನ್ನು ನಿರ್ಮಿಸಿ, ಅದರಲ್ಲೇ ಬಹುತೇಕ ಚಿತ್ರೀಕರಣ ಮಾಡಲು ಸಿದ್ಧತೆ ಮಾಡುತ್ತಿದ್ದಾರಂತೆ. ಈಗಾಗಲೇ ಸೆಟ್ ನಿರ್ಮಾಣ ಕೆಲಸ ಕೂಡಾ ಆರಂಭವಾಗಿದೆಯಂತೆ.
ಇದನ್ನೂ ಓದಿ: 'ಅಗ್ನಿಸಾಕ್ಷಿ'ಯ ಸಿದ್ದಾರ್ಥ್ ಅತ್ತಿಗೆಗೆ ಇರುವ ಆ ದೊಡ್ಡ ಕನಸು ಯಾವುದು ಗೊತ್ತಾ..?
ಇನ್ನು ಈ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸುತ್ತಿರುವ ನಾಯಕಿ ಯಾರು ಎಂಬ ವಿಚಾರವನ್ನು ಆರ್. ಚಂದ್ರು ಇನ್ನೂ ರಿವೀಲ್ ಮಾಡಿಲ್ಲ. ಸದ್ಯದಲ್ಲೇ ನಾಯಕಿ ಯಾರು ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ ಚಂದ್ರು. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ, ಎಲ್ಲಾ ಭಾಷೆಗಳಿಗೂ ಪರಿಚಯವಿರುವ ನಟಿಯನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಜೊತೆಗೆ ಜಗಪತಿ ಬಾಬು, ಕೋಟಾ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್ ಸೇರಿದಂತೆ ಹಲವರು ನಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯ ನಟರು ಚಿತ್ರತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.